
ಮೂಡಿಗೆರೆ: ಸಮಾಜದಲ್ಲಿ ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ಪದ್ದತಿ ದಾರಿ ತಪ್ಪಿದರೆ ಆ ಧರ್ಮದ ಅನುಯಾಯಿಗಳ ಜೀವನ ಕೂಡ ಹಳಿ ತಪ್ಪುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಗುರು ಅಶ್ಫಾಕ್ ಫೈಝಿ ನಂದಾವರ ಹೇಳಿದರು.
ತಾಲ್ಲೂಕಿನ ಗಬ್ಗಲ್ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಎಸ್ ಕೆಎಸ್ಎಸ್ಎಫ್ ವತಿಯಿಂದ 15ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಸಮಸ್ತ ಸಂಸ್ಥೆಯ ಶತಮಾನೋತ್ಸವ ಸಮ್ಮೇಳನದ ಪ್ರಚಾರಾರ್ಥಕವಾಗಿ ಶುಕ್ರವಾರ ನಡೆದ ಮತ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಧಾರ್ಮಿಕತೆಯ ಪದ್ಧತಿ ಹಾಗೂ ಪರಂಪರೆಗಳು ದಾರಿ ತಪ್ಪಿದಾಗ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಲಿದೆ. ಧಾರ್ಮಿಕ ವ್ಯವಸ್ಥೆಯನ್ನು ಸರಿದಾರಿಗೆ ಕೊಂಡೊಯ್ಯಲು ಆಯಾ ಧರ್ಮಿಯ ಗುರುಗಳು ಪ್ರಯತ್ನಿಸಬೇಕು. ಎಲ್ಲಾ ಧರ್ಮಗಳ ಧರ್ಮಗ್ರಂಥಗಳು ಸಮಾಜಕ್ಕೆ ಒಳಿತಿನ ಸಂದೇಶವನ್ನು ಸಾರುತ್ತದೆ. ಧರ್ಮಗ್ರಂಥಗಳ ಮೇಲೆ ನಂಬಿಕೆ ಇರುವವರು ಸಮಾಜದಲ್ಲಿ ಸುಸಂಸ್ಕೃತರಾಗಿ ಎಲ್ಲಾ ಧರ್ಮವನ್ನು ಒಂದೇ ರೀತಿಯಲ್ಲಿ ಪ್ರೀತಿಸುತ್ತಾರೆ. ಧರ್ಮಗ್ರಂಥಗಳ ಮೇಲೆ ನಂಬಿಕೆ ಇಲ್ಲದವರಿಂದ ಸಮಾಜದಲ್ಲಿ ಒಡಕು ಮೂಡುತ್ತದೆ. ಒಡೆದಾಳುವ ನೀತಿಯ ರಾಜಕಾರಣದಿಂದ ಧರ್ಮಗಳು ಸಂಕಷ್ಟಕ್ಕೆ ಸಿಲುಕುತ್ತಿವೆ' ಎಂದರು.
ಬಂಟ್ವಾಳ ತಾಲ್ಲೂಕಿನ ಮಿತ್ತಬೈಲ್ ಇರ್ಷಾದ್ ದಾರಿಮಿ ಅಲ್ ಜಝ್ರಿ ಮಾತನಾಡಿ, 'ಜಗತ್ತಿನಲ್ಲಿ ಸರ್ವ ಶ್ರೇಷ್ಠವಾದ ಗುಣವನ್ನು ಹೊಂದಲು ಶಿಕ್ಷಣದ ಅಗತ್ಯವಿದೆ. ಅನಕ್ಷರಸ್ಥರು ಸಮಾಜದಲ್ಲಿ ತಿರಸ್ಕೃತರಾಗುತ್ತಾರೆ. ಶಿಕ್ಷಣದಿಂದ ವ್ಯಕ್ತಿಯು ಸುಸಂಸ್ಕೃತನಾಗಬೇಕು. ಸಮಸ್ತ ಕೇರಳ ಎಂಬ ಧಾರ್ಮಿಕ ಸಂಸ್ಥೆಯ ವ್ಯಾಪ್ತಿಯಲ್ಲಿ ದೇಶದ ಉದ್ದಗಲಕ್ಕೂ ಶಿಕ್ಷಣ ಸಂಸ್ಥೆಗಳಿವೆ. ಪ್ರತಿ ವರ್ಷ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಶಿಕ್ಷಣ ನೀಡಿ, ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾಡಿ ಹೊರ ತರುವ ಕೆಲಸವನ್ನು ಸಮಸ್ತ ಕೇರಳ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಆ ಸಂಸ್ಥೆಯ 100ನೇ ವರ್ಷದ ಶತಮಾನೋತ್ಸವ ಕಾರ್ಯಕ್ರಮ ಮುಂದಿನ ವರ್ಷ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ' ಎಂದರು.
ಇದೇ ವೇಳೆ ಅನ್ವರ್ ಅಲಿ ಹುದವಿ ಮುಗ್ರಾಲ್ ಅವರ ಇಷ್ಕ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಕೇರಳದ ಧಾರ್ಮಿಕ ವಿದ್ವಾಂಸ ಸಯ್ಯದ್ ಅಲಿ ತಂಗಳ್, ಗಬ್ಗಲ್ ಮಸೀದಿ ಖತೀಬ್ ಮಹಮ್ಮದ್ ಅನ್ಸೀಫ್ ಫೈಝಿ, ಅನ್ಸಾರಿ ಯಮಾನಿ, ನಜೀರ್ , ಎಸ್.ಕೆ.ಮಹಮ್ಮದ್ ಹಾಜಿ, ಮೂಡಿಗೆರೆ ಬದ್ರಿಯಾ ಮಸೀದಿ ಖತೀಬ್ ಮುಸ್ತಫಾ ಯಮಾನಿ, ಸಿನಾನ್ ಫೈಝಿ, ಸುಲೈಮಾನ್ ಮುಸ್ಲಿಯಾರ್, ಸಿ.ಕೆ.ಇಬ್ರಾಹಿಂ, ಅಕ್ರಂ, ಬಿ.ಎಚ್.ಮಹಮ್ಮದ್, ಅಬ್ದುಲ್ಲಾ, ಕಿರುಗುಂದ ಅಬ್ಬಾಸ್, ಮೊಯ್ದಿನ್ ಸೇಟ್, ಮಹಮ್ಮದ್ ಫೈಜ್, ಮಹಮ್ಮದ್ ರಜೀನ್, ಮಹಮ್ಮದ್ ಅಲಿ, ಅಬೂಬಕ್ಕರ್ ಸಿದ್ಧೀಕ್, ಮಹಮ್ಮದ್ ಮುಸ್ತಫಾ, ರಮೀಜ್, ಜಿ.ಎಂ.ರಮ್ಲಾನ್ ಮತ್ತಿತರರು ಇದ್ದರು.