
ಬಿ.ಎಚ್.ಕೈಮರ (ನರಸಿಂಹರಾಜಪುರ): ಬೇರೆ ಭಾಷೆ ಬಗ್ಗೆ ದ್ವೇಷ ಮಾಡದೆ ಎಲ್ಲಾ ಭಾಷೆಯನ್ನು ಕಲಿಯಿರಿ. ಆದರೆ, ಕನ್ನಡ ಭಾಷೆಯನ್ನು ಮಾತ್ರ ಪ್ರೀತಿಸಬೇಕು ಎಂದು ಬಿ.ಎಚ್.ಕೈಮರದ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ರವಿರಾಜ್ ಹೆಗ್ಡೆ ಹೇಳಿದರು.
ತಾಲ್ಲೂಕಿನ ಬಿ.ಎಚ್.ಕೈಮರದ ಐ.ಟಿ.ಐ ಕಾಲೇಜಿನಲ್ಲಿ ಮಂಗಳವಾರ ತಾಲ್ಲೂಕು ಕಸಾಪ ಮಹಿಳಾ ಘಟಕದಿಂದ ಆಯೋಜಿಸಿದ್ದ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪದ ಬಳಸದೆ ಕನ್ನಡದಲ್ಲಿ ಮಾತನಾಡುವ ಆಶು ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕಕ್ಕೆ ಬಂದ ಬೇರೆ ಭಾಷಿಗರೊಂದಿಗೆ ನಾವು ಅವರ ಭಾಷೆಯಲ್ಲೇ ಉತ್ತರ ಕೊಡಲು ಹೋಗುತ್ತೇವೆ. ಬೇರೆ ಭಾಷಿಗರು ಕನ್ನಡ ಭಾಷೆ ಕಲಿಯುವುದೇ ಇಲ್ಲ. ಆದರೆ, ಕನ್ನಡಿಗರು ತಮಿಳುನಾಡು, ಕೇರಳಕ್ಕೆ ಹೋದರೆ ಅಲ್ಲಿ ನಮಗೆ ಕನ್ನಡ ಭಾಷೆ ಸಿಗುವುದಿಲ್ಲ. ಆದ್ದರಿಂದ ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಿದರೆ ಅದು ಹೆಚ್ಚು ಪರಿಣಾಮಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡಬೇಕು. ಆತ್ಮವಿಶ್ವಾಸ, ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಕಸಾಪ ಮಹಿಳಾ ಘಟಕದಿಂದ ಆಶುಭಾಷಣ ಸ್ಪರ್ಧೆ ಏರ್ಪಡಿಸಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ವಾಕ್ಚಾತುರ್ಯ, ವಿಷಯ ಸಂಗ್ರಹ ಹಾಗೂ ಮಾತನಾಡುವ ಕಲೆ ವೃದ್ಧಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಕನ್ನಡ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ. ಕನ್ನಡ ದಿನ ಪತ್ರಿಕೆ ಓದುತ್ತಾ ಬಂದರೆ ಒಬ್ಬ ಒಳ್ಳೆಯ ಮಿತ್ರನನ್ನು ಸಂಪಾದನೆ ಮಾಡಿದಂತೆ ಆಗಲಿದೆ ಎಂದರು.
ಸಾಹಿತಿ ಜಯಮ್ಮ, ಐಟಿಐ ಕಾಲೇಜಿನ ಕಚೇರಿ ಅಧೀಕ್ಷಕ ಕಿರಣ್ ಬೇಂದ್ರೆ, ವಾಣಿ, ನಿವೃತ್ತ ಶಿಕ್ಷಕಿ ಜಯಂತಿ, ಸಾಹಿತ್ಯ ಪರಿಷತ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಜರಿದ್ದರು.
ಆಶು ಭಾಷಣ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ಪ್ರಥಮಸ್ಥಾನ, ಅರ್ಜುನ್ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.