
ನರಸಿಂಹರಾಜಪುರ: ‘ಹಿಂದೂ ಧರ್ಮ ಹೊಸತನದಲ್ಲಿ ಬಂದಿದ್ದು ಸನಾತನವೂ ಹೌದು ನಿತ್ಯ ನೂತನವೂ ಹೌದು’ ಎಂದು ಮತ್ತೂರಿನ ಸಾಮಾಜಿಕ ಕಾರ್ಯಕರ್ತ ಯಾದವಕೃಷ್ಣ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ ಸಮೀಪ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಭಾನುವಾರ ರಾತ್ರಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂ ಸಮಾಜೋತ್ಸವ ಯಾರ ವಿರುದ್ಧವೂ ಅಲ್ಲ, ಹಿಂದೂ ಸಮುದಾಯದ ಬಗ್ಗೆ ಚಿಂತಿಸುವ ಉತ್ಸವ. ಜಗತ್ತಿನ ಐವತ್ತು ನಾಗರಿಕತೆಗಳ ಮೇಲೂ ಹಿಂದೂ ಸಂಸ್ಕೃತಿಯ ಪ್ರಭಾವವಿತ್ತು. ಜಗತ್ತಿಗೆ ಸುಸಂಸ್ಕೃತ ನಾಗರಿಕತೆ, ಜೀವನ ಮೌಲ್ಯ, ಹೇಗೆ ಬದುಕಬೇಕೆಕು ಎಂಬುದನ್ನು ಕಲಿಸಿಕೊಟ್ಟಿದ್ದು ಭಾರತ. ಎಷ್ಟೇ ಸಾವಿರ ವರ್ಷಗಳು ಉರುಳಿದರೂ ಹಿಂದುತ್ವದ ವಿಚಾರಗಳು ನಾಶವಾಗುವುದಿಲ್ಲ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ದೇಶಭಕ್ತಿ, ಸಮಯ ಪಾಲನೆ, ಅನುಶಾಸನ, ಸೇವೆ, ಪ್ರಾಮಾಣಿಕತೆಯಾಗಿದೆ. ದೇಶದ ಮೇಲೆ 1400 ಆಕ್ರಮಣಗಳು ನಡೆದರೂ ಹಿಂದೂ ಸಂಸ್ಕೃತಿಯ ಮೌಲ್ಯ ಹಿಡಿದಿಟ್ಟುಕೊಂಡಿದ್ದು, ಪುರಾತನ ಮೌಲ್ಯ ಕಟ್ಟಿಕೊಟ್ಟವರು, ಜೀವಂತ ಇಟ್ಟವರು ಮಹಿಳೆಯರು. ಭಾರತದ ಕುಟುಂಬ ಪದ್ಧತಿ ಉಳಿಸುವ ಅವಶ್ಯಕತೆಯಿದೆ. ಸಮಾಜದಲ್ಲಿರುವ ಅಸ್ಪ್ರಶ್ಯತೆ, ಮೇಲು– ಕೀಳು, ಜಾತಿ ವ್ಯವಸ್ಥೆ ಮೂಲದಿಂದ ತೆಗೆದು ಹಾಕುವ ಕಾರ್ಯವಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಸ್. ಕೃಷ್ಣಯ್ಯ ಮಾತನಾಡಿ, ಹಿಂದೂ ಸಮಾಜೋತ್ಸವ ಬೇರೆ ಧರ್ಮವನ್ನು ನಿಂದಿಸುವ ಉತ್ಸವವಲ್ಲ. ಯಾವುದೇ ಪಕ್ಷದ ಚಿಹ್ನೆಯಡಿ ನಡೆಯುವ ಕಾರ್ಯಕ್ರಮವಲ್ಲ. ಹಿಂದೂ ಧರ್ಮೀಯರನ್ನು ಜಾಗೃತಿಗೊಳಿಸುವುದು, ಧರ್ಮದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಉಪಾಧ್ಯಕ್ಷೆ ಸುಜಾತ, ಸವಿತಾ ದಕ್ಷಿಣ ಮೂರ್ತಿ, ಭಾನುಮತಿ ಭಾಗವಹಿಸಿದ್ದರು.
ದೀಪೋತ್ಸವ, ಶೋಭಾಯಾತ್ರೆ: ಬಸ್ತಿಮಠದ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿ, ಕೋಟೆ ಮಾರಿಕಾಂಬ ಆವರಣದ ಆಂಜನೇಯಸ್ವಾಮಿ ಸನ್ನಿಧಿ, ಹಳೇಪೇಟೆ ಗುತ್ಯಮ್ಮ ದೇವಸ್ಥಾನ ಸನ್ನಿಧಿಯಿಂದ ಡಾ.ಅಂಬೇಡ್ಕರ್ ವೃತ್ತದ ಕೊಟ್ಟೂರು ಬಸವೇಶ್ವರ ದೇವಸ್ಥಾನದವರೆಗೆ 4 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಬದಿ ಸುಮಾರು 25 ಸಾವಿರ ದೀಪಗಳನ್ನು ಪ್ರಜ್ವಲಿಸಲಾಯಿತು. ಶೋಭಾಯಾತ್ರೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.