
ಚಿಕ್ಕಮಗಳೂರು: ಶ್ರೀಗಂಧ ಎಂದರೆ ಚಿನ್ನಕ್ಕೆ ಸಮ ಎಂಬಂತಾಗಿದೆ. ಚುರ್ಚುಗುಡ್ಡದಲ್ಲಿ ಬೆಳೆದಿರುವ ಶ್ರೀಗಂಧಕ್ಕೆ ರಕ್ಷಣೆ ಇಲ್ಲದೆ ಕಳ್ಳರ ಪಾಲಿಗೆ ತೆರೆದ ಖಜಾನೆಯಂತಾಗಿದೆ.
ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕಿನ ಬಯಲು ಸೀಮೆಯ ವ್ಯಾಪ್ತಿಗೆ ವಿಸ್ತರಿಸಿರುವ ಕುರುಚಲು ಗಿಡಗಳನ್ನು ಹೊಂದಿರುವ ಗುಡ್ಡಗಳುನ್ನು ಚುರ್ಚೆಗುಡ್ಡ ಎಂದು ಕರೆಯಲಾಗುತ್ತದೆ. ಈ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗಿಡಗಳ ಹರಡಿಕೊಂಡಿವೆ.
ಮಳೆ ಮತ್ತು ಬಿಸಿಲಿನ ವಾತಾವರಣ ಮಿಶ್ರಣ ಆಗಿರುವುದರಿಂದ ಮತ್ತು ಜೋಗು ಪ್ರದೇಶ ಹೊಂದಿರುವುದರಿಂದ ಶ್ರೀಗಂಧ ವ್ಯಾಪಕವಾಗಿ ಹರಡಿಕೊಂಡಿದೆ. ಪ್ರಕೃತಿದತ್ತವಾಗಿ ಬೆಳೆದಿರುವ ಈ ಗಿಡಗಳಿಗೆ ರಕ್ಷಣೆ ಎಂಬುದು ಇಲ್ಲವಾಗಿದೆ. ಚಿಕ್ಕಮಗಳೂರು–ಕಡೂರು ರಸ್ತೆಯಿಂದ ಆರಂಭವಾಗಿ ಎಮ್ಮೆದೊಡ್ಡಿ, ಕಾಮೇನಹಳ್ಳಿ ಅರಣ್ಯದ ತನಕ ಹೊಂದಿಕೊಂಡಿದೆ.
ಈ ವ್ಯಾಪ್ತಿಯಲ್ಲಿ ಎತ್ತ ಕಣ್ಣಾಯಿಸಿದರೂ ಶ್ರೀಗಂಧದ ಗಿಡಗಳು ಕಾಣಿಸುತ್ತವೆ. ಈ ಕುರುಚಲು ಅರಣ್ಯದಲ್ಲಿ ಸ್ವಲ್ಪ ಒಳಹೊಕ್ಕು ನೋಡಿದರೆ ಶ್ರೀಗಂಧದ ಗಿಡಗಳಿಗೆ ಅಲ್ಲಲ್ಲಿ ಕೊಡಲಿ ಏಟು ಬಿದ್ದಿರುವುದು ಕಾಣಿಸುತ್ತದೆ. ಈ ಅಮೂಲ್ಯ ಸಂಪತ್ತಿಗೆ ರಕ್ಷಣೆ ಇಲ್ಲದಿರುವುದು ಕಳ್ಳರಿಗೆ ಭಂಡಾರವನ್ನೇ ತೆರೆದಿಟ್ಟಂತೆ ಕಾಣಿಸುತ್ತಿದೆ. ಕೆಲವೆಡೆ ಬೇಲಿ ಇದ್ದರೆ ಹಲವೆಡೆ ಬೇಲಿ ಇಲ್ಲ. ಇದ್ದರೂ ಅವುಗಳು ಕಳ್ಳರ ಪಾಲಿಗೆ ಲೆಕ್ಕಕ್ಕಿಲ್ಲದಂತೆ ಆಗಿವೆ. ಅರಣ್ಯ ಪ್ರದೇಶದೊಳಗೆ ನುಗ್ಗಿ ಸಿನಿಮೀಯ ಮಾದರಿಯಲ್ಲಿ ಶ್ರೀಗಂಧ ಸಾಗಿಸಲಾಗುತ್ತದೆ ಎಂಬುದು ಸುತ್ತಮುತ್ತಲ ಗ್ರಾಮಗಳ ಜನರ ಅಭಿಪ್ರಾಯ.
ಆಗಾಗ ಕಳ್ಳರು ಸಿಕ್ಕಿಬಿದ್ದರೂ ಅವರು ಕೂಲಿ ಕಾರ್ಮಿಕರು ಈ ಕೃತ್ಯದ ಹಿಂದಿರುವ ಪ್ರಮುಖ ಆರೋಪಿಗಳು ಸಿಗುತ್ತಿಲ್ಲ. ಇದರಿಂದಾಗಿ ಪ್ರತಿವರ್ಷವೂ ಗಂಧದ ಮರಗಳಿಗೆ ಕೊಡಲಿ ಏಟು ಬಿದ್ದಿರುವುದು ಅರಣ್ಯದಲ್ಲಿ ಸ್ವಲ್ಪ ಓಡಾಡಿದರೂ ಗೊತ್ತಾಗುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಮರಗಳನ್ನು ಕಡಿದು ಸಿಪ್ಪೆ ತೆಗೆದಿರುವುದು, ಮರಗಳಿಗೆ ಕೊಡಲಿ ಪೆಟ್ಟು ನೀಡಿ ಅವುಗಳಲ್ಲಿ ಗಂಧ ಬಲಿಯದೆ ಹಾಗೇ ಬಿಟ್ಟಿರುವ ಮರಗಳು ಚುರ್ಚೆಗುಡ್ಡದಲ್ಲಿ ವ್ಯಾಪಕವಾಗಿ ಕಾಣಿಸುತ್ತವೆ. ಕಾಡಿನ ಮಧ್ಯದಲ್ಲಿ ವಾರಗಳ ತನಕ ವಾಸ್ತವ್ಯ ಹೂಡಿ ಬಲಿತ ಮರಗಳನ್ನು ಹುಡುಕಿ ರಾತ್ರಿ ವೇಳೆ ಅವುಗಳನ್ನು ಕಡಿದು ಸಾಗಿಸಲಾಗುತ್ತಿದೆ. ಕಡಿದ ಮರಗಳನ್ನು ಹಂತ–ಹಂತವಾಗಿ ಸಾಗಾಟ ಮಾಡಲಾಗುತ್ತದೆ. ಒಂದು ರೀತಿಯ ‘ಪುಷ್ಪಾ’ ಸಿನಿಮಾ ಮಾದರಿಯಲ್ಲಿ ಸಾಗಣೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.
‘ಅರಣ್ಯ ಇಲಾಖೆ ಸುತ್ತಲೂ ಸಮರ್ಪಕ ಬೇಲಿ ನಿರ್ಮಿಸಬೇಕು. ಅಲ್ಲಲ್ಲಿ ಕ್ಯಾಂಪ್‌ಗಳನ್ನು ನಿರ್ಮಿಸಿ ಸಿಬ್ಬಂದಿ ನಿಯೋಜಿಸಿ ಕಳ್ಳತನ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂಬುದು ಪರಿಸರ ಆಸಕ್ತರ ಒತ್ತಾಯ.
ಬೆಂಕಿಗೂ ಗಂಧದ ಮರ ಬಲಿ
ಚುರ್ಚೆ ಗುಡ್ಡದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕಾಳ್ಗಿಚ್ಚು ಅಲ್ಲಲ್ಲಿ ಕಾಣಿಸುಕೊಳ್ಳುತ್ತದೆ. ಈ ಸಂದರ್ಭದಲ್ಲೂ ಅಮೂಲ್ಯವಾದ ಶ್ರೀಗಂಧ ಮರಗಳು ಬಲಿಯಾಗುತ್ತಿವೆ ಎನ್ನುತ್ತಾರೆ ಪರಿಸರ ಪ್ರೇಮಿಗಳು. ಬೆಂಕಿ ನಿಗ್ರಹಕ್ಕೆ ಹಲವು ಮಾರ್ಗೋಪಾಯಗಳನ್ನು ಅರಣ್ಯ ಇಲಾಖೆ ಕಂಡುಕೊಂಡಿದೆ. ಆದರೆ ದನ ಮೇಯಿಸುವವರು ಶ್ರೀಗಂಧ ಕಳ್ಳರು ಕಾಡಿಗೆ ಬೆಂಕಿ ಇಡುತ್ತಿದ್ದಾರೆ. ಇದರಿಂದ ಹಂತ–ಹಂತವಾಗಿ ಶ್ರೀಗಂಧ ನಶಿಸುತ್ತಿದೆ. ಹಿರೇಗೌಜ ಬೇಸಿಗೆಗೂ ಮೊದಲೇ ಬೆಂಕಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ವಿವರಿಸುತ್ತಾರೆ. ಸಿಬ್ಬಂದಿ ಕೊರತೆ ಕೂಡ ಅರಣ್ಯ ಇಲಾಖೆಯನ್ನು ಕಾಡುತ್ತಿದೆ. ಸಿಬ್ಬಂದಿ ನೇಮಕ ಮಾತ್ರ ನಡೆಯುತ್ತಿಲ್ಲ. ಇದು ಕೂಡ ಶ್ರೀಗಂಧ ರಕ್ಷಣೆಗೆ ತೊಡಕಾಗಿದೆ ಎನ್ನುವುದು ಪರಿಸರಾಸಕ್ತರ ಅಭಿಪ್ರಾಯ. ಶ್ರೀಗಂಧ ಕಳ್ಳತನ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ತಪ್ಪು ತಿಳುವಳಿಕೆಯಿಂದ ಕೆಲವರು ಹಚ್ಚುವ ಬೆಂಕಿಗೆ ಮರಗಳು ಬಲಿಯಾಗುತ್ತಿವೆ. ಬೆಂಕಿ ತಡೆಯಲು ನಿಯಂತ್ರಣಾ ಕೊಠಡಿ ತೆರೆಯಲಾಗಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 7204004261 ಸಂಖ್ಯೆಗೆ ತುರ್ತು ಕರೆ ಮಾಡಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.