ADVERTISEMENT

ಮೂಡಿಗೆರೆ |ವಸತಿ‌ ರಹಿತ ಪರಿಶಿಷ್ಟರಿಗೆ ಸೂರು ಒದಗಿಸಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:18 IST
Last Updated 9 ಆಗಸ್ಟ್ 2025, 6:18 IST
ಮೂಡಿಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಪ.ಜಾತಿ, ಪಂಗಡದ ಕುಂದುಕೊರತೆ ಸಭೆಯನ್ನು ತಹಶೀಲ್ದಾರ್ ಅಶ್ವಿನಿ ಉದ್ಘಾಟಿಸಿದರು
ಮೂಡಿಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಪ.ಜಾತಿ, ಪಂಗಡದ ಕುಂದುಕೊರತೆ ಸಭೆಯನ್ನು ತಹಶೀಲ್ದಾರ್ ಅಶ್ವಿನಿ ಉದ್ಘಾಟಿಸಿದರು   

ಮೂಡಿಗೆರೆ: ತಾಲ್ಲೂಕಿನ ವಿವಿಧೆಡೆ ಕಾಫಿ ಕೂಲಿ ಲೈನ್‌ಗಳಲ್ಲಿ ವಾಸವಿರುವ ವಸತಿ‌ ರಹಿತ ಪರಿಶಿಷ್ಟ ಕುಟುಂಬಗಳಿಗೆ ಸೂರು ಒದಗಿಸಬೇಕು ಎಂದು ಭಾರತ ಕಮ್ಯುನಿಸ್ಟ್ ‌(ಎಂಎಲ್) ಪಕ್ಷದ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಪಂಡಿತ್ ದೀನ್‌ದಯಾಳ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟರು ಎಂಬ ಕಾರಣಕ್ಕೆ ಕೆಲವೆಡೆ ಬಾಡಿಗೆ ಮನೆಗಳು ಸಿಗುತ್ತಿಲ್ಲ. ಅನಿವಾರ್ಯವಾಗಿ ಕೂಲಿ ಲೈನ್‌ಗಳಲ್ಲಿ ವಾಸ ಮಾಡಬೇಕಿದ್ದು, ಕೆಲವೊಮ್ಮೆ ಮಾಲೀಕರ ದೌರ್ಜನ್ಯಕ್ಕೂ ಒಳಗಾಗಬೇಕಾಗುತ್ತದೆ. ಕೂಲಿ ಲೈನ್‌ಗಳಲ್ಲಿ ಇರುವ ಕಾರ್ಮಿಕರ ಮಕ್ಕಳ ಶಿಕ್ಷಣವೂ ಅರ್ಧಕ್ಕೆ‌‌‌ ಮೊಟಕಾಗುತ್ತಿದ್ದು, ಅವರೆಲ್ಲರಿಗೂ ಉತ್ತಮ ಭವಿಷ್ಯ ಕಲ್ಪಿಸುವ ಸಲುವಾಗಿ ತುರ್ತಾಗಿ ‌ವಸತಿ ಸೌಲಭ್ಯ ಒದಗಿಸಬೇಕಿದೆ’ ಎಂದರು.

ADVERTISEMENT

ಬಹುಜನ ಸಮಾಜ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ ಆವರಣದಲ್ಲಿ ಪ್ರತಿವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಈ ಬಾರಿ ಸರ್ಕಾರಿ ಶಾಲೆ ಆವರಣದಲ್ಲಿ ಉತ್ಸವ ನಡೆಸಲು ಅವಕಾಶ ನೀಡಬಾರದು. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ದಲಿತ ದೌರ್ಜನ್ಯ ಕಾಯ್ದೆಯಂತೆ ದೂರು ನೀಡಲು ಠಾಣೆಗೆ ಬಂದರೆ ಆ ದೂರಿನಲ್ಲಿ ಸತ್ಯಾ ಸತ್ಯತೆ ಇದ್ದರೆ ಮಾತ್ರ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು. ಸುಳ್ಳು ಪ್ರಕರಣ ದಾಖಲಿಸುವುದು ಸರಿಯಲ್ಲ. ಜಿಲ್ಲಾ ಮಟ್ಟದ ದಲಿತ ದೌರ್ಜನ್ಯ ಸಮಿತಿಗೆ ಮೂಡಿಗೆರೆ ತಾಲ್ಲೂಕಿನ ನಿವೃತ್ತ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ, ಆದರೆ ಅವರಿಗೆ ಬಡವರ ಬಗ್ಗೆ ಕಾಳಜಿ ಹಾಗೂ ತಿಳಿವಳಿಕೆ ಕಡಿಮೆ ಇರುವುದರಿಂದ ಅವರನ್ನು ಕೈ ಬಿಟ್ಟು ಸೂಕ್ತವಾದ ಸದಸ್ಯರನ್ನು ಆಯ್ಕೆ ಮಾಡಿದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ’ ಎಂದರು.

ಪ.ಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಡಿವೈಎಸ್ಪಿ ಶೈಲೇಂದ್ರ, ತಹಶೀಲ್ದಾರ್ ಅಶ್ವಿನಿ, ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ಎಂಜಿನಿಯರ್ ಚನ್ನಕೇಶವ, ಸಿಪಿಐ ರಾಜಶೇಖರ್, ಪಿಎಸ್ಐಗಳಾದ ಶ್ರೀನಾಥ್ ರೆಡ್ಡಿ, ದಿಲೀಪ್, ರಾಜ್ಯ ಲ್ಯಾಂಪ್ಸ್ ಮಹಾಮಂಡಳದ ಮಾಜಿ ಅಧ್ಯಕ್ಷ ಮುತ್ತಪ್ಪ, ಎಂ.ಎಸ್. ಅನಂತ್, ಬಿ.ಎಂ. ಶಂಕರ್, ಸಬ್ಲಿ ದೇವರಾಜ್, ಹೊನ್ನೇಶ್ ಇದ್ದರು.

ಮೂಡಿಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಕುಂದುಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಮಾತನಾಡಿದರು

‘ಅಡ್ಡಿಪಡಿಸಿದರೆ ಇಲಾಖೆಗೆ ತಿಳಿಸಿ’ ‘ಚರ್ಚ್ ಸೇರಿದಂತೆ ಇತರ ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಮಾಡಲು ಅಡ್ಡಿಪಡಿಸಿದರೆ ಪೊಲೀಸ್ ಇಲಾಖೆಯ ತುರ್ತು ಸಂಖ್ಯೆಗೆ ಕರೆಮಾಡಿ ತಿಳಿಸಿ. ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಪ್ರಾರ್ಥನಾ ಮಂದಿರಗಳು ಅನುಮತಿ ಪಡೆದಿರಬೇಕು. ಅನುಮತಿ ಪಡೆಯದೆ ಸ್ಥಾಪಿಸಿ ಪ್ರಾರ್ಥನೆ ಮಾಡಿದರೆ ಕಾನೂನಾತ್ಮಕವಾಗಿ ತಪ್ಪಾಗುತ್ತದೆ. ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಮಶಾನ ಭೂಮಿಗೆ ಹೋಗಲು ರಸ್ತೆ ಸಮಸ್ಯೆ ಭೂಮಿ ಒತ್ತುವರಿಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಪೋಲಿಸ್ ಇಲಾಖೆಯಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.