ADVERTISEMENT

ಚಿಕ್ಕಮಗಳೂರು | ಮನೆ ಬಾಗಿಲಿಗೆ ಕೊಳಚೆ ನೀರು

ಶಾಂತಿನಗರದಲ್ಲಿ ಮೂಲ ಸೌಕರ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:25 IST
Last Updated 18 ಅಕ್ಟೋಬರ್ 2025, 5:25 IST
ಚಿಕ್ಕಮಗಳೂರಿನ ಶಾಂತಿನಗರದಲ್ಲಿ ಚರಂಡಿಯ ಕೊಳಚೆ ನೀರು ಮನೆ ಬಾಗಿಲಿಗೆ ಬಂದಿರುವುದು
ಚಿಕ್ಕಮಗಳೂರಿನ ಶಾಂತಿನಗರದಲ್ಲಿ ಚರಂಡಿಯ ಕೊಳಚೆ ನೀರು ಮನೆ ಬಾಗಿಲಿಗೆ ಬಂದಿರುವುದು   

ಚಿಕ್ಕಮಗಳೂರು: ಮನೆಗೆ ಬಾಗಿಲಿಗೆ ಬಂದು ನಿಲ್ಲುವ ಕೊಳಚೆ ನೀರು, ರಸ್ತೆಯಲ್ಲಿ ಹರಿಯುವ ಶೌಚ ನೀರು, ಕುಡಿಯುವ ನೀರಿಗೆ ಪರದಾಟ... ಇದು ನಗರದ ಶಾಂತಿನಗರ ಬಡಾವಣೆಯ ಸ್ಥಿತಿ.

ನಗರದ ಅಂಬೇಡ್ಕರ್ ರಸ್ತೆಗೆ(ಮಾರ್ಕೆಟ್ ರಸ್ತೆ) ಹೊಂದಿಕೊಂಡಿರುವ ಶಾಂತಿನಗರಕ್ಕೆ ಹೋದರೆ ದುರ್ನಾತ ಮೂಗಿಗೆ ರಾಚುತ್ತದೆ. ಹೆಚ್ಚಾಗಿ ಬಡ ಕುಟುಂಬಗಳೇ ವಾಸಿಸುವ ಈ ಬಡಾವಣೆಯಲ್ಲಿ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ.

ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಕೊಳಚೆ ನೀರು ಮನೆ ಬಾಗಿಲಿನಲ್ಲಿ ನಿಲ್ಲುತ್ತಿದೆ. ನಿತ್ಯ ಮೂಗು ಮುಚ್ಚಿಕೊಂಡೇ ಜನ ಸಂಚರಿಸುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ಇನ್ನಷ್ಟು ನಿಕೃಷ್ಟದ ಜೀವನವನ್ನು ಇಲ್ಲಿನ ನಿವಾಸಿಗಳು ಜೀವಿಸುತ್ತಿದ್ದಾರೆ. 

ADVERTISEMENT

ನೀರು ಹರಿಯಬೇಕಾದ ಚರಂಡಿಯಲ್ಲಿ ಕಸ, ತ್ಯಾಜ್ಯ ತುಂಬಿಕೊಂಡಿವೆ. ಜೋರು ಮಳೆ ಬಂದರೆ ಇದೇ ನೀರು ಮನೆಗಳಿಗೂ ನುಗ್ಗುತ್ತದೆ. ಚರಂಡಿ ನೀರು ಮಾತ್ರವಲ್ಲದೇ ಶೌಚಾಲಯದ ನೀರು ಕೂಡ ಮನೆ ಸೇರುತ್ತದೆ. ಒಳಚರಂಡಿ ಸಮರ್ಪಕವಾಗಿ ಇಲ್ಲದ ಕಾರಣ ಶೌಚಗುಂಡಿ ನೀರು ರಸ್ತೆಯ ಮೇಲೂ ಹರಿಯುತ್ತದೆ. ಇದರ ಮೇಲೆಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ನಿವಾಸಿಗಳು.

ಈ ಸಮಸ್ಯೆ ಬಗ್ಗೆ ನಗರಸಭೆ ಹಾಗೂ ತಹಶೀಲ್ದಾರ್‌ ಅವರಿಗೆ ದೂರು ನೀಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಈವರೆಗೆ ಯಾವುದೇ ಕ್ರಮಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.

‘ಈ ವಾರ್ಡ್‌ನಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ವಾಸವಿದ್ದು, ಸರ್ಕಾರ ಸರಿಯಾಗಿ ಮೂಲ ಸೌಕರ್ಯ ನೀಡುವಲ್ಲಿ ವಿಫಲವಾಗಿದೆ. ಶಾಂತಿನಗರ ಕಲುಷಿತ ವಾತಾವರಣದಲ್ಲಿ ಅನಾರೋಗ್ಯದ ಭಯದಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳಿದರು.

ಸೊಳ್ಳೆಗಳ ಕಾಟ ಕೂಡ ವಿಪರೀತವಾಗಿದೆ. ಚರಂಡಿ ಮತ್ತು ಒಳಚರಂಡಿ ನೀರು ಸಮರ್ಪಕವಾಗಿ ಹರಿದು ಹೋದರೆ ಎಲ್ಲಾ ಸಮಸ್ಯೆ ತಪ್ಪಲಿದೆ ಎಂದರು.

ಇನ್ನು ಕಸ ನಿರ್ವಹಣೆ ಕೂಡ ಸರಿಯಾಗಿ ಆಗುತ್ತಿಲ್ಲ. ಅಲ್ಲಲ್ಲಿ ಕಸದ ರಾಶಿ ಬಡಾವಣೆಯಲ್ಲಿ ಕಾಣಿಸುತ್ತದೆ. ಬೀದಿ ನಾಯಿಗಳ ಕಾಟ ಕೂಡ ಹೆಚ್ಚಾಗಿದ್ದು, ಮನೆಯಿಂದ ಮಕ್ಕಳು ಹೊರಬರಲು ಹೆದರುತ್ತಿದ್ದಾರೆ. ನಗರಸಭೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂಬುದು ನಿವಾಸಿಗಳ ಒತ್ತಾಯ.

ಶಾಂತಿನಗರದಲ್ಲಿ ಚರಂಡಿಯಲ್ಲಿ ನೀರು ನಿಂತಿರುವುದು
ಕುಡಿವ ನೀರಿನ ಸಮಸ್ಯೆ
ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ನಗರಸಭೆಯಿಂದ ಬರುವ ನೀರು ನಿತ್ಯ ಬಳಕೆ ಸಾಕಾಗುವುದಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡರು. ನಗರಸಭೆಯಿಂದ ಸರಿಯಾದ ಸಮಯಕ್ಕೆ ನೀರು ಬದುವುದಿಲ್ಲ. ಕುಡಿಯುವ ನೀರಿಗೆ ನಿತ್ಯ ಪರದಾಡುವಂತಾಗಿದೆ. ನೀರಿನಲ್ಲಿ ಮಣ್ಣು ಮಿಶ್ರಣವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ನಗರಸಭೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ನೀರಿನ ಸಮಸ್ಯೆ ನೀಗಿಸಬೇಕು ಎಂಬುದು ಅವರ ಒತ್ತಾಯ.
ರಸ್ತೆಯಲ್ಲೇ ಆಟ ವಾಯು ವಿಹಾರ
ಈ ಬಡಾವಣೆಯಲ್ಲಿ ಮಕ್ಕಳು ಹೆಚ್ಚಾಗಿದ್ದು ಆಟಕ್ಕೆ ಸೂಕ್ತ ಪಾರ್ಕ್ ಅಥವಾ ಮೈದಾನ ಇಲ್ಲವಾಗಿದೆ. ವೃದ್ಧರು ವಾಯು ವಿಹಾರ ಮಕ್ಕಳ ಆಟ ಎಲ್ಲದಕ್ಕೂರಸ್ತೆಯೇ ಗತಿಯಾಗಿದೆ. ರಸ್ತೆ ಕೂಡ ಕಿರಿದಾಗಿದ್ದು ಅಪಾಯದ ಸ್ಥಿತಿಯಲ್ಲಿ ವಾಹನ ಸಂಚಾರಿಸುತ್ತಿವೆ. ಅನೇಕ ವಾಹನ ಸವಾರರು ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದು ಅಪಘಾತ ಸಂಭವಿಸುತ್ತಿವೆ ಎಂದು ನಿವಾಸಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.