ಶೃಂಗೇರಿ: ಇಲ್ಲಿನ ಶಾರದಾ ಮಠದಲ್ಲಿ ಶಾರದಾಂಬೆಯ ಮಹಾರಥೋತ್ಸವ ಮತ್ತು ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಉತ್ಸವ ಪಟ್ಟಣದ ರಾಜಬೀದಿಯಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಶಾರದಾ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ಬೆಳಗಿನ ಆಹ್ನಿಕ ಕಾರ್ಯಕ್ರಮ ಮುಗಿಸಿ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಗುರು ನಿವಾಸದಲ್ಲಿ ಚಂದ್ರಮೌಳೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಕಾಲ್ನಡಿಗೆಯಲ್ಲಿ ಬಂದು, ದೋಣಿಯಲ್ಲಿ ತುಂಗಾನದಿ ದಾಟಿ, ಗಂಗಾ ಪೂಜೆ ನೆರವೇರಿಸಿದರು. ಬಳಿಕ, ಶಾರದಾ ಮಠದ ಹೊರ ಪ್ರಾಂಗಣದ ಎಲ್ಲಾ ದೇವಾಲಯಗಳಿಗೂ, ಅಧಿಷ್ಠಾನ ಮಂದಿರಗಳಿಗೂ ತೆರಳಿ ಪೂಜೆ ಸಲ್ಲಿಸಿದರು.
ನವರಾತ್ರಿಯ 12 ದಿನ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಿದ ಶಾರದೆಗೆ ಶುಕ್ರವಾರ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ರಥ ಸಾಗುವ ದಾರಿಯನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ರಂಗೋಲಿ ಹಾಕಲಾಗಿತ್ತು. ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾಜಬೀದಿಯಲ್ಲಿ ಉತ್ಸವ ನಡೆಸಲಾಯಿತು. ಭಕ್ತರು ಜಯಘೋಷಗಳೊಂದಿಗೆ ರಥ ಎಳೆದರು.
ರಥದ ಮುಂದೆ ಪುಷ್ಪಾಲಂಕೃತ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಆಸೀನರಾದರು. ಜಯಘೋಷ, ವಿಪ್ರತ್ತೋಮರ, ವೇದಘೋಷಗಳು, ಮಂತ್ರ ಪಠಣದೊಂದಿಗೆ ಸೇರಿದ್ದ ಸಹಸ್ರಾರು ಭಕ್ತಾದಿಗಳಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.
ಶಾರದಾಂಬೆಯ ಮಹಾರಥೋತ್ಸವದ ಪ್ರಯುಕ್ತ ಭಕ್ತರು ಮಾಡಿದ 50ಕ್ಕೂ ಹೆಚ್ಚು ಸ್ತಬ್ದ ಚಿತ್ರಗಳು ಮೆರವಣಿಗೆಗೆ ಕಳೆ ನೀಡಿತ್ತು. ಮೆರವಣಿಗೆಯಲ್ಲಿ ಶಾಸಕ ಟಿ.ಡಿ ರಾಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮತ್ತು ಶಾರದಾ ಮಠದ ಆಡಳಿತಾಧಿಕಾರಿ ಪಿ.ಎ ಮುರಳಿ, ಕೃಷ್ಣಮೂರ್ತಿ ಭಟ್, ಶಮಂತ್ ಭಟ್ ಇದ್ದರು.
ರಥೋತ್ಸವದ ನಂತರ ಶಾರದಾ ಸನ್ನಿಧಿಯಲ್ಲಿ ಹಗಲು ದರ್ಬಾರ್ ನಡೆಯಿತು. ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ರಾಜ ಪೋಷಾಕಿನಲ್ಲಿ ಸ್ವರ್ಣ ಖಚಿತ ಸಿಂಹಾಸನದಲ್ಲಿ ಆಸೀನರಾಗಿ, ಭಕ್ತರನ್ನು ಆಶೀರ್ವದಿಸಿದರು. ಚತುರ್ವೇದ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ಶಂಕರ ದಿಗ್ವಿಜಯ ಪಾರಾಯಣಗಳು ನಡೆದವು. ದೇವಿ ಸಪ್ತಶತಿ ಪಾರಾಯಣದ ಕೊನೆಯ ಅಧ್ಯಾಯವಾದ 13ನೇ ಅಧ್ಯಾಯವನ್ನು ಮಠದ ವಿದ್ವಾಂಸ ಶಿವಕುಮಾರ ಶರ್ಮ ವಾಚಿಸಿದರು. ಇದಕ್ಕೂ ಮೊದಲು ಚಿನ್ನದ ರಥದಲ್ಲಿ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿ, ದೇವಸ್ಥಾನದ ಒಳ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.