ADVERTISEMENT

ಶಿವರಾತ್ರಿ: ಧರ್ಮಸ್ಥಳಕ್ಕೆ ದಣಿವರಿಯದ ನಡಿಗೆ

ಎಲ್ಲೆಲ್ಲೂ ಪ್ಲಾಸ್ಟಿಕ್ ಬಾಟಲಿ: ಭಕ್ತರ ಸುರಕ್ಷತೆ ಮರೆತ ಆಡಳಿತ

ವಿಜಯಕುಮಾರ್ ಎಸ್.ಕೆ.
Published 13 ಫೆಬ್ರುವರಿ 2026, 8:05 IST
Last Updated 13 ಫೆಬ್ರುವರಿ 2026, 8:05 IST
ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು ಚಾರ್ಮಾಡಿ ಘಾಟಿಯಲ್ಲಿ ತಂಟೋಪ ತಂಟವಾಗಿ ಸಾಗಿದರು
ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು ಚಾರ್ಮಾಡಿ ಘಾಟಿಯಲ್ಲಿ ತಂಟೋಪ ತಂಟವಾಗಿ ಸಾಗಿದರು   

ಚಿಕ್ಕಮಗಳೂರು: ನೆತ್ತಿಯ ಮೇಲೆ ಉರಿ ಬಿಸಿಲು, ಹರಿಯುತ್ತಿರುವ ಬೆವರು, ದಿನಗಟ್ಟಲೆ ನಡೆದರೂ ಕರಗದ ಉತ್ಸಾಹದ ನಡುವೆ ಭಕ್ತರು ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿದ್ದಾರೆ. ಒಂದೆಡೆ ಭಕ್ತರು ಉತ್ಸಾಹದಿಂದ ನಡೆಯುತ್ತಿದ್ದರೆ, ಇನ್ನೊಂದೆಡೆ ಚಾರ್ಮಾಡಿ ಘಾಟಿಯಲ್ಲಿ ಎಲ್ಲೆಂದರೆಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬೀಳುತ್ತಿದೆ.

ಶಿವರಾತ್ರಿಯಂದು ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಧರ್ಮಸ್ಥಳದತ್ತ ಭಕ್ತರ ದಂಡು ಹೊರಟಿದೆ. ಚಾರ್ಮಾಡಿ ಕಣಿವೆಯಲ್ಲಿ ಭಕ್ತರು ಸಾಲುಗಟ್ಟಿದ್ದಾರೆ. ಬೆಂಗಳೂರು, ಬಳ್ಳಾರಿ, ಗಂಗಾವತಿ, ಹೊಸಕೋಟೆ, ಮಂಡ್ಯ, ಹಾಸನ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆಯಿಂದ ಭಕ್ತರು ಸಾಲುಗಟ್ಟಿ ಧರ್ಮಸ್ಥಳದತ್ತ ಸಾಗುತ್ತಿದ್ದಾರೆ.

ಯುವಕರು, ವೃದ್ಧರು, ಮಹಿಳೆಯರು, ಅಂಗವಿಕಲರೂ ಧರ್ಮಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೆಲವರು ಮಕ್ಕಳನ್ನು ಹೊತ್ತು ಸಾಗುತ್ತಿದ್ದರೆ, ಬಹುತೇಕರು ತಮ್ಮ ಬಟ್ಟೆಯ ಬ್ಯಾಗ್‌ಗಳನ್ನು ತಲೆಯ ಮೇಲೆ ಹೊತ್ತು ತೆರಳುತ್ತಿದ್ದಾರೆ.

ಯಾವುದೇ ರಸ್ತೆಯಲ್ಲಿ ಬಂದರೂ ಅಂತಿಮವಾಗಿ ಮೂಡಿಗೆರೆ ಬಳಿ ಎಲ್ಲಾ ರಸ್ತೆಗಳು ಕೂಡುತ್ತವೆ. ಅಲ್ಲಿಂದ ಚಾರ್ಮಾಡಿ ಘಾಟಿಯಲ್ಲಿ ಎಲ್ಲರೂ ಒಟ್ಟಾಗಿ ಸಾಗುತ್ತಿದ್ದಾರೆ. ಭಕ್ತರಿಗೆ ಅಲ್ಲಲ್ಲಿ ಊಟ, ಉಪಾಹಾರ, ನೀರು, ತಿನಿಸು, ಎಳನೀರನ್ನು ಸ್ಥಳೀಯರು ನೀಡುತ್ತಿದ್ದಾರೆ. ಸ್ಥಳೀಯರ ಜತೆಗೆ ಬೆಂಗಳೂರು, ಬಳ್ಳಾರಿಯಿಂದಲೂ ಬಂದಿರುವ ಭಕ್ತರ ತಂಡ, ಪಾದಯಾತ್ರಿಗಳಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ನಾರಾಯಣಸ್ವಾಮಿ ಎಂಬುವರು ಐದು ಸಾವಿರಕ್ಕೂ ಹೆಚ್ಚು ಜೋಳದ ಖಡಗ್‌ ರೊಟ್ಟಿಗಳನ್ನೂ ತಂದು ಸ್ಥಳದಲ್ಲೇ ಕಾಯಿಪಲ್ಯ ತಯಾರಿಸಿ ಭಕ್ತರಿಗೆ ವಿತರಿಸುತ್ತಿದ್ದಾರೆ. ಚಾರ್ಮಾಡಿ ಘಾಟಿಯ ಸೇತುವೆಯೊಂದರ ಬಳಿ ಟೆಂಟ್ ನಿರ್ಮಿಸಿಕೊಂಡು ನಾಲ್ಕು ದಿನಗಳಿಂದ ಊಟ–ಉಪಾಹಾರ ತಯಾರಿಸಿ ಭಕ್ತರಿಗೆ ಉಣಬಡಿಸುತ್ತಿದ್ದಾರೆ.

‘ಮೊದಲಿಗೆ ನಾನೂ ಹೀಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿದ್ದೆ. ಆಗ ಘಾಟಿಯಲ್ಲಿ ಆಹಾರ ಸಿಗದೆ ಪರದಾಡುತ್ತಿದ್ದ ಭಕ್ತರ ಹಸಿವು ಕಂಡು ಅನ್ನದಾನ ಆರಂಭಿಸಿದೆ. ವರ್ಷದಿಂದ ವರ್ಷಕ್ಕೆ ದಾನ ಮಾಡುವ ಶಕ್ತಿ ಹೆಚ್ಚಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಫಲ್ಗುಣಿ ಬಳಿ ಮಹೇಂದ್ರಕುಮಾರ್ ಗುರೂಜಿ ಅವರ 2ನೇ ವರ್ಷದ ಸ್ಮರಣಾರ್ಥ ಅವರ ಅಭಿಮಾನಿಗಳು ಹಣ್ಣು ಮತ್ತು ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಿದರು. ಬೆಂಗಳೂರಿನ ಯುವಕರ ತೊಂಡವೊಂದು ಏಳು ಸಾವಿರ ಎಳೆನೀರುಗಳನ್ನು ತಂದು ಭಕ್ತರಿಗೆ ದಾರಿಯಲ್ಲಿ ವಿತರಣೆ ಮಾಡಿತು. ಬೆಂಗಳೂರಿನ ಕೆ.ಆರ್.ಪುರದ ಕುಟುಂಬವೊಂದು ಅತ್ತಿಗೆರೆ ಬಳಿ ಶಾಮಿಯಾನ ನಿರ್ಮಿಸಿಕೊಂಡು ಭಕ್ತರಿಗೆ ಊಟ ಬಡಿಸುತ್ತಿದೆ. ಮುದ್ದೆ, ಕಾಳು ಸಾಂಬಾರ್, ಅನ್ನ, ತರಕಾರಿ ಪಲ್ಯ ಸೇರಿ ಭಕ್ತರಿಗೆ ಹೊಟ್ಟೆ ತುಂಬ ಉಣಬಡಿಸುತ್ತಿದೆ. ಬಯಲು ಸೀಮೆಯ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಪ್ರಿಯವಾದ ಮುದ್ದೆ ಸಿಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಟೆಂಟ್‌ ಬಲಿ ಜಮಾಯಿಸಿದ್ದು ಕಂಡು ಬಂತು.

ಆದರೆ, ರಸ್ತೆಯುದ್ದಕ್ಕೂ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದು ರಸ್ತೆ ಬದಿಯಲ್ಲಿ ಸಾಮಾನ್ಯವಾಗಿದೆ. ಮೂಡಿಗೆರೆ ದಾಟಿದ ಬಳಿಕ ಎಲ್ಲಿಯೂ ಪ್ಲಾಸ್ಟಿಕ್ ಬಾಟಲಿ ಎಸೆಯದಂತೆ  ಅಲ್ಲಲ್ಲಿ ಚೀಲಗಳನ್ನು ಅಳವಡಿಸಲಾಗಿದೆ. ಬೇರು ಭೂಮಿ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ತಂಡವು, ಅಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಇರಿಸಿ ಸ್ವಚ್ಛತೆ ಕಾಪಾಡಲು ಮನವಿ ಮಾಡಿದೆ. ಆದರೂ, ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ಲಾಸ್ಟಿಕ್ ರಾಶಿ ಹೆಚ್ಚಾಗಿದೆ.

ಚಾರ್ಮಾಡಿ ಘಾಟಿ ಸೇರಿದಂತೆ ರಸ್ತೆಯುದ್ದಕ್ಕೂ ಬಯಲೇ ಶೌಚಾಲಯವಾಗಿದ್ದು, ಮಹಿಳೆಯರು ಮುಜಗರದ ನಡುವೆ ಬಯಲಲ್ಲೇ ಶೌಚ ಮಾಡುವ ಅನಿವಾರ್ಯತೆ ಇದೆ. ಅಲ್ಲಲ್ಲೇ ತಾತ್ಕಾಲಿಕ ಶೌಚಾಲಯಗಳನ್ನು ಇರಿಸಿದರೆ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರಿನ ಹೊರ ವಲಯದಲ್ಲಿ ತಂಟವಾಗಿ ಸಾಗುತ್ತಿರುವ ಭಕ್ತರು
ಮೂಡಿಗೆರೆ ತಾಲ್ಲೂಕಿನ ಅತ್ತಿಗೆರೆ ಬಳಿ ಬೆಂಗಳೂರಿನ ಕೆ.ಆರ್.ಪುರದ ತಂಡವೊಂದು ಭಕ್ತರಿಗೆ ಊಟ ಬಡಿಸುತ್ತಿರುವುದು

ಚಾರ್ಮಾಡಿ ಕಣಿವೆಯಲ್ಲಿ ಇಳಿದು ಸಾಗುತ್ತಿರುವ ಭಕ್ತರು ಅಲ್ಲಲ್ಲೇ ಊಟ, ಉಪಚಾರ ಮಾಡುತ್ತಿರುವ ದಾನಿಗಳು ಘಾಟಿಯಲ್ಲಿ ಎಲ್ಲೆಲ್ಲೂ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ

ಕಾಲಿಗೆ ಮಸಾಜ್ ಹೊಟ್ಟೆಗೆ ಊಟ

ಮೂಡಿಗೆರೆ ಬಳಿಯ ಕಾಫಿ ಕ್ಯೂರಿಂಗ್ ಆವರಣದಲ್ಲಿ ಭಕ್ತರಿಗಾಗಿ ದೊಡ್ಡ ಬಿಡಾರವೇ ತೆರೆದುಕೊಂಡಿದೆ. ಮೂಡಿಗೆರೆ ಸಾಮಾಜಿಕ ಸೇವಾ ಸಮಿತಿ ಪ್ರತಿ ವರ್ಷ ಈ ಕಾರ್ಯ ಮಾಡಲಾಗುತ್ತಿದೆ. ಊಟದ ವ್ಯವಸ್ಥೆ ಜತೆಗೆ ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಸ್ವಯಂ ಸೇವಕರು ಪಾದಯಾತ್ರಿಗಳ ಕಾಲಿಗೆ ನೋವು ನಿವಾರಕ ತೈಲ ಹಚ್ಚಿ ಮಸಾಜ್ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ವೈದ್ಯರನ್ನು ನಿಯೋಜಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಈ ಸ್ಥಳದಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿದೆ.

ಭಕ್ತರ ಬಗ್ಗೆ ಕಾಣದ ಕಾಳಜಿ

ಸುರಕ್ಷತೆಯೇ ಇಲ್ಲದೆ ಪಾದಯಾತ್ರಿಗಳು ರಸ್ತೆ ಬದಿಯಲ್ಲಿ ಅಪಾಯ ಮೈಮೆಲೆ ಎಳೆದುಕೊಂಡು ನಡೆಯುತ್ತಿದ್ದರೂ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಯಾವುದೇ ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ಇನ್ನು ರಸ್ತೆ ಬದಿ ಹರಿಯುವ ಹೇಮಾವತಿ ನದಿ ಮತ್ತು ಜಲಪಾತಗಳ ಬಳಿ ಜನ ಇಳಿದು ಶೌಚಾಲಯಕ್ಕೆ ತೆರಳುವುದು ಸ್ನಾನ ಮಾಡುವುದು ಕಂಡು ಬಂತು. ಭಕ್ತರು ಅಪಾಯಕ್ಕೆ ಸಿಲುಕಿದರೆ ಯಾರು ಜವಾಬ್ದಾರಿ. ಒಂದು ವಾರಗಳ ಕಾಲ ನಡೆಯುವ ಪಾದಯಾತ್ರೆಯನ್ನು ನಿರ್ವಹಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಭಕ್ತರಿಗೆ ಕನಿಷ್ಠ ಮಾರ್ಗದರ್ಶನ ನೀಡುವ ಕೆಲಸ ಮಾಡಲಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳ ಸುರಕ್ಷತೆ ಬಗ್ಗೆ ಧರ್ಮಸ್ಥಳದ ದೇಗುಲದ ಆಡಳಿತ ಮಂಡಳಿಯಾದರೂ ಸ್ವಲ್ಪ ಮುತುವರ್ಜಿ ವಹಿಸಬೇಕಿತ್ತು ಎಂದರು. ಅಪಘಾತ ಸಂಭವಿಸಬಹುದಾದ ಜಾಗಗಳಲ್ಲಿ ಪಾದಚಾರಿಗಳು ರಸ್ತೆಗೆ ಬಾರದಂತೆ ವಾಹನಗಳು ಪಾದಚಾರಿಗಳ ಮಾರ್ಗಕ್ಕೆ ಹೋಗದಂತೆ ಟೆಪ್ ಮಾದರಿಯ ಬ್ಯಾರಿಕೇಡ್‌ಗಳನ್ನದರೂ ಅಲ್ಲಲ್ಲಿ ಅಳವಡಿಸಬಹುದು. ಅದನ್ನೂ ಯಾರೂ ಮಾಡಿಲ್ಲ. ಪಾದಚಾರಿಗಳು ಮತ್ತು ವಾಹನಗಳು ಒಂದೇ ರಸ್ತೆಯಲ್ಲಿ ಸಾಗುತ್ತಿರುವುದು ಅಪಾಯ ಎಂದು ಹೇಳಿದರು. ‘ಇಡೀ ಪಾದಯಾತ್ರೆ ಸಾಗುವ ದಾರಿಯಲ್ಲಿ ಎಲ್ಲಿಯೂ ಪೊಲೀಸರ ಸುಳಿವು ಕಾಣಿಸುವುದಿಲ್ಲ. ಪೊಲೀಸ್ ಇಲಾಖೆಗೆ ಜವಾಬ್ದಾರಿ ಇಲ್ಲವೇ ಜವಾಬ್ದಾರಿ ತೆಗೆದುಕೊಳ್ಳಲು ದೊಡ್ಡ ದುರಂತಗಳೇ ಸಂಭವಿಸಬೇಕೆ’ ಎಂಬುದು ಸ್ಥಳೀಯರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.