ಚಿಕ್ಕಮಗಳೂರು: ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಕಾಫಿನಾಡಿನ ಅರಣ್ಯ ಸಂಪತ್ತು ಚಳಿಗಾಲ ಮತ್ತು ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಭಯದಲ್ಲಿ ಸಿಲುಕುತ್ತಿದೆ. ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಪ್ರಯತ್ನ ಒಂದೆಡೆಯಾದರೆ, ಕಿಡಿಗೇಡಿಗಳು ಹಚ್ಚುವ ಕಿಡಿಗೆ ಶೋಲಾಕಾಡು ಮತ್ತು ವನ್ಯಜೀವಿಗಳು ಆತಂಕ ಎದುರಿಸುವಂತಾಗಿದೆ.
ಕಾಡಿನ ನೆಲದಲ್ಲಿ ಸಂಗ್ರಹವಾಗುವ ಎಲೆ, ಕಡ್ಡಿ-ಕೊಂಬೆ, ಉರುಳಿಬಿದ್ದ ಮರಗಳು, ಒಣಗಿದ ಹುಲ್ಲು, ಪೊದೆಗಳು ಕೊಳೆತು ಮಣ್ಣು ಸೇರಬೇಕು. ಈ ಕ್ರಿಯೆಗೆ ವರ್ಷಗಟ್ಟಲೇ ಸಮಯ ಬೇಕಾಗುತ್ತದೆ. ಈ ಎಲ್ಲಾ ಅರಣ್ಯ ತ್ಯಾಜ್ಯವು ಕೊಳೆತು, ಮಣ್ಣಿಗೆ ಮತ್ತೆ ಪೋಷಕಾಂಶಗಳು ಸೇರುವುದು ಕಾಡಿಗೆ ಅತ್ಯಗತ್ಯ.
ಜಿಲ್ಲೆಯಲ್ಲಿ ಶೋಲಾ ಕಾಡು ಮತ್ತು ಹುಲ್ಲುಗಾವಲನ್ನು ಒಳಗೊಂಡಿರುವ ಅರಣ್ಯ ಹೆಚ್ಚಾಗಿದ್ದು, ಹುಲ್ಲುಗಾವಲಿನಲ್ಲಿ ಹೆಚ್ಚಿನದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ವರ್ಷ ಚಳಿಗಾಲ ಆರಂಭದಲ್ಲೇ ಚಾರ್ಮಾಡಿ ಘಾಟಿಯ ಬಿದಿರತಳ ಸುತ್ತಮುತ್ತ ಎರಡು ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡಿತು. ಫೆಬ್ರುವರಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಹುಲ್ಲುಗಾವಲು ಭಸ್ಮವಾಯಿತು.
ಗುಡ್ಡಗಾಡು ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುವುದರಿಂದ ಬೆಂಕಿ ನಂದಿಸುವುದು ಅರಣ್ಯ ಇಲಾಖೆಗೆ ಸಾಹಸದ ಕೆಲಸವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರೂ ವಾಹನಗಳನ್ನು ರಸ್ತೆ ಬದಿಯಲ್ಲೆ ನಿಲ್ಲಿಸಬೇಕಿದೆ. ಇದರಿಂದ ಗಿರಿ ಪ್ರದೇಶದ ಬೆಂಕಿ ನಂದಿಸುವುದು ಕಷ್ಟ. ರಸ್ತೆ ಬದಿಯಲ್ಲಿನ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನೆರವಾಗುತ್ತಾರೆ.
ಉಳಿದಂತೆ ಕಡಿದಾದ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯೇ ಕಾರ್ಯನಿರ್ವಹಿಸಬೇಕು. ಸೊಪ್ಪು, ಫೈರ್ ಕಟರ್, ಬೀಟರ್ಸ್, ಬ್ಲೋಯರ್ಸ್ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಒಣಗಿರುವ ಹುಲ್ಲುಗಾವಲಿನಲ್ಲಿ ಜೋರಾಗಿ ಹೊತ್ತಿಕೊಳ್ಳುವ ಬೆಂಕಿ ನಂದಿಸುವುದು ಕಷ್ಟದ ಕೆಲಸ.
ಬೇಸಿಗೆಗೂ ಮುನ್ನ ಅಗ್ನಿ ಗೆರೆ ನಿರ್ಮಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಬೆಂಕಿಯ ಮೂಲಕವೇ ಹುಲ್ಲುಗಾವಲು ಸುಟ್ಟು ಗೆರೆಗಳನ್ನು ನಿರ್ಮಿಸಿದರೆ ಕಾಳ್ಗಿಚ್ಚು ಹರಡುವುದನ್ನು ತಡೆಯಲು ಸಾಧ್ಯ. ಈ ಕೆಲಸವನ್ನು ಕೆಲವೆಡೆ ಅರಣ್ಯ ಇಲಾಖೆ ಮಾಡಿದೆ, ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ಆಗಿಲ್ಲ.
ಮುಳ್ಳಯ್ಯನಗಿರಿ ಭಾಗ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಅರಣ್ಯ ಇಲಾಖೆ ವ್ಯಾಪ್ತಿಗೆ ಇನ್ನೂ ಸೇರ್ಪಡೆಯಾಗಿಲ್ಲ. ಆದ್ದರಿಂದ ಬೆಂಕಿ ಗೆರೆ ನಿರ್ಮಾಣ ಆಗಿಲ್ಲ. ಮುಳ್ಳಯ್ಯನಗಿರಿಯಲ್ಲೂ ಶೋಲಾ ಕಾಡುಗಳನ್ನು ರಕ್ಷಿಸಲು ಕೆಲವೆಡೆ ಬೆಂಕಿ ಗೆರೆ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಮುಳ್ಳಯ್ಯನಗಿರಿ ಭಾಗವನ್ನು ಮೀಸಲು ಅರಣ್ಯವಾಗಿ ಘೋಷಿಸಬೇಕು ಎಂಬ ವಿಷಯ ಇನ್ನೂ ಪ್ರಸ್ತಾವನೆ ಹಂತದಲ್ಲೇ ಇದೆ. ಘೋಷಣೆಯಾಗುವ ತನಕ ನಿರ್ವಹಣೆ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವಹಿಸಬೇಕು ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.