ಶೃಂಗೇರಿ: ಶೃಂಗೇರಿ ಶಾರದಾ ಮಠದಲ್ಲಿ ಸೋಮವಾರ ಶಾರದಾ ದೇವಿಗೆ ಜ್ಞಾನಮುದ್ರೆ, ಅಮೃತ ಕಳಶ ಮತ್ತು ಪುಸ್ತಕಗಳನ್ನು ಕೈಗಳಲ್ಲಿ ಧರಿಸಿ, ವೀಣೆಯನ್ನು ಹಿಡಿದುಕೊಂಡ ವೀಣಾ ಶಾರದಾಲಂಕಾರ ಮಾಡಲಾಗಿತ್ತು.
ಶಾರದಾ ಮಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಯವರು ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.
ಸಾಂಸ್ಕೃತಿಕ ಕಾರ್ಯವದ ಅಂಗವಾಗಿ ಬೆಂಗಳೂರಿನ ಡಾ.ನಿಶ್ತಲಾ ಕೃಷ್ಣವೇಣಿ, ಮೀನಾಮೂರ್ತಿ ಮತ್ತು ವೃಂದದವರಿಂದ ವೀಣಾವಾದನ ನಡೆಯಿತು.
ಸಂಜೆ ನಡೆದ ಬೀದಿ ಉತ್ಸದಲ್ಲಿ ಶೃಂಗೇರಿ ತಾಲ್ಲೂಕಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಭಕ್ತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲಾ–ಕಾಲೇಜುಗಳು ಮತ್ತು ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.
ದರ್ಬಾರು:
ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಯವರು ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ಪ್ರಾಂಗಣದಿಂದ ಶಾರದಾಮ್ಮನವರ ದೇವಾಲಯದ ಉತ್ಸವದಲ್ಲಿ ಭಾಗವಹಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು. ವೇದ, ವಾದ್ಯ ಪೋಷಗಳೊಂದಿಗೆ, ಛತ್ರಚಾಮರಗಳೊಂದಿಗೆ ದೇವಾಲಯದ ಒಳ ಪ್ರಾಂಗಳದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು. ಬಳಿಕ ಗುರುಗಳು ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.