ಶೃಂಗೇರಿ: ಶೃಂಗೇರಿಯ ಈಶ್ವರಗಿರಿಯಲ್ಲಿರುವ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಶಾರದಾ ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿಯವರು ಬೆಳಿಗ್ಗೆ ಶಾರದ ಮಠದ ಎಲ್ಲ ದೇವಾಲಯಗಳಿಗೂ ತೆರಳಿ ದೇವರ ದರ್ಶನ ಪಡೆದು, ಶಾರದಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಾಲ್ನಡಿಗೆಯಲ್ಲಿ ಈಶ್ವರಗಿರಿಯ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸ್ತಂಭ ಗಣಪತಿ, ಭವಾನಿ ಅಮ್ಮನವರಿಗೆ ಪೂಜೆ ನೆರವೇರಿಸಿದರು.
ಮಲಹಾನಿಕರೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಪಂಚಾಮೃತಭಿಷೇಕ, ಶ್ರೀಸೂಕ್ತ ಮತ್ತು ಪುರುಷಸೂಕ್ತ ಪಠಣದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿ ಪ್ರಯುಕ್ತ ಶಾರದಾ ಮಠದ ಗುರು ನಿವಾಸದ ಸ್ವರ್ಣ ಮಂಟಪದಲ್ಲಿ ವಿರಾಜಮಾನರಾಗಿರುವ ಚಂದ್ರಮೌಳೇಶ್ವರ ಸ್ವಾಮಿಯ ಸ್ಫಟಿಕ ಲಿಂಗಕ್ಕೆ ಉಭಯ ಗುರುಗಳು ರಾತ್ರಿಯಿಂದ ಬೆಳಿಗ್ಗೆವರೆಗೆ ವಿಶೇಷ ಪೂಜೆ ಸಲ್ಲಿಸಿದರು. ಋತ್ವಿಜರಿಂದ ರುದ್ರಪಠಣದೊಂದಿಗೆ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಬೆಳಿಗ್ಗೆವರೆಗೆ ಪೂಜೆ ನೇರವೇರಿತು. ಮಠದ ಪುರೋಹಿತರಾದ ಕೃಷ್ಣ ಭಟ್, ಶಿವಕುಮಾರ ಶರ್ಮ, ಸೀತಾರಾಮ ಶರ್ಮ, ನಾಗರಾಜ ಭಟ್, ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ರುದ್ರಪಠಣ ನಡೆಯಿತು.
ಸಾವಿರಾರು ಭಕ್ತಾದಿಗಳು ಬೆಳಗ್ಗೆಯಿಂದಲೇ ಈಶ್ವರಗಿರಿಯ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿ ಮತ್ತು ಕಿಗ್ಗಾದ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ಹಣ್ಣು–ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.