ADVERTISEMENT

ಚಿಕ್ಕಮಗಳೂರು| ಕೃಷಿಕರ ಬಾಳಿಗೆ ಬೆಳಕಾದವರು ಸಿದ್ದರಾಮೇಶ್ವರರು: ಎಚ್.ಡಿ.ತಮ್ಮಯ್ಯ

ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:53 IST
Last Updated 21 ಜನವರಿ 2026, 2:53 IST
ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಮತ್ತು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಮತ್ತು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಚಿಕ್ಕಮಗಳೂರು: ಭಕ್ತಿ ಹಾಗೂ ಕಾಯಕದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಸಿದ್ದರಾಮೇಶ್ವರರು, ಕೆರೆ-ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರ ಬಾಳಿಗೆ ಬೆಳಕಾದವರು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತ ವರ್ಗವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾಜದ ಮುನ್ನೆಲೆಗೆ ತರುವ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಕಾಯಕ ಯೋಗಿ ಸಿದ್ದರಾಮೇಶ್ವರರು. ವಚನಗಳ ಮೂಲಕ ಮೂಢನಂಬಿಕೆ, ಅಂಧಕಾರ ತೊಡೆಯಲು ಯತ್ನಿಸಿದ್ದರು ಎಂದರು.

ADVERTISEMENT

ಸಿದ್ದರಾಮೇಶ್ವರರು ತಮ್ಮ ತತ್ವಜ್ಞಾನವನ್ನು ಸರಳ ಭಾಷೆಯಲ್ಲಿ ತಿಳಿಸುವ ಮೂಲಕ ಜನ ಸಾಮಾನ್ಯರ ಹೃದಯದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಕಾಯಕವೇ ಕೈಲಾಸ ಎಂಬ ಸಿದ್ಧಾಂತವನ್ನು ಜೀವನದ ಮೂಲಕ ಸ್ವೀಕರಿಸಿ ಸಾಮಾಜಿಕ, ಸಮಾನತೆ ಮತ್ತು ಮಾನವೀಯತೆಯನ್ನು ವಚನಗಳ ಮೂಲಕ ಸಮಾಜಕ್ಕೆ ತಿಳಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ವಚನಗಳು ಜೀವನ ಮಾರ್ಗದರ್ಶಕ ತತ್ವಗಳು. ಅವುಗಳನ್ನು ಜಗತ್ತಿಗೆ ಸಾರಿದ ಸಿದ್ಧರಾಮೇಶ್ವರರು ಸಂತ ಶಿವಯೋಗಿಗಳು ಎಂದು ತಿಳಿಸಿದರು.

ಬಸವಾದಿ ಶರಣರು ಹಾಕಿಕೊಟ್ಟ ವಿಚಾರವನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಮಹನೀಯರ, ಮಹಾಪುರುಷರ  ಜಯಂತಿಯನ್ನು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತಗೊಳಿಸಬಾರದು. ದಾರ್ಶನಿಕರ ವಿಚಾರಧಾರೆಗಳು ಇಡೀ ಪ್ರಪಂಚವೇ ಮೆಚ್ಚುವ ವಿಚಾರಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ‘ಮಳೆಯ ದೇವರು ಎಂದು ಕರೆಸಿಕೊಂಡಿರುವ ಶಿವಯೋಗಿ ಸಿದ್ದರಾಮೇಶ್ವರರು, ಹೋದಡೆಯಲ್ಲೆಲ್ಲ ಕೆರೆ ಕಟ್ಟಿಸುವ ಕಾಯಕ ಮಾಡಿದರು. ನೀರಾವರಿ ಯೋಜನೆಗಳ ಮೂಲಕ ಕೃಷಿಕರು ಹಾಗೂ ಜನಸಾಮಾನ್ಯರಿಗೆ ಹತ್ತಿರವಾದರು. ಆ ಕಾರಣಕ್ಕಾಗಿ ಇಂದಿಗೂ ಕೂಡ ಸಿದ್ಧರಾಮೇಶ್ವರರನ್ನು ಮಳೆಯ ದೇವರು ಎಂದೇ ಕರೆಯಲಾಗುತ್ತದೆ’ ಎಂದು ಹೇಳಿದರು.

ನೊಳಂಬ ಸಮಾಜದ ಮುಖಂಡರಾದ ಎಸ್.ಸಿದ್ದಪ್ಪ, ಎಸ್.ಎಂ.ರಾಜಪ್ಪ, ಮಂಜುಳಮ್ಮ, ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ಕೊಲ್ಲಾ ಬೋವಿ, ತಾಲ್ಲೂಕು ಬೋವಿ ಸಮಾಜದ ಅಧ್ಯಕ್ಷ ನಾಗರಾಜ್, ಲಲಿತೇಗೌಡರು, ಶಿವಾನಂದ, ಎಸ್.ಆರ್.ಸೋಮಣ್ಣ, ಎಂ.ಸತೀಶ್, ಬಿ.ಆರ್.ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪತಹಶೀಲ್ದಾರ್ ಪ್ರಸನ್ನ ಉಪಸ್ಥಿತರಿದ್ದರು.

ಸಿದ್ದರಾಮೇಶ್ವರರು ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಆದರ್ಶ ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.