ಶೃಂಗೇರಿ ಶಾರದಾ ಪೀಠದಲ್ಲಿ ನಡೆದ ‘ಸ್ತೋತ್ರ ತ್ರಿವೇಣಿ ಮಹಾ ಸಮರ್ಪಣೆ ಕಾರ್ಯಕ್ರಮ’ಕ್ಕೆ ಮಠದ ಗುರುಗಳಾದ ಭಾರತೀತೀರ್ಥ ಶ್ರೀಗಳು ಚಾಲನೆ ನೀಡಿದರು (ಎಡಚಿತ್ರ) ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು
ಶೃಂಗೇರಿ (ಚಿಕ್ಕಮಗಳೂರು): 36ನೇ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಶೃಂಗೇರಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 50 ಸಾವಿರ ಜನ ಸೇರಿದ್ದರು. ‘ಸುವರ್ಣ ಭಾರತೀ’ ಹೆಸರಿನ ಕಾರ್ಯಕ್ರಮಕ್ಕೂ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಎಲ್ಲರೂ ಸೇರಿ ಒಂದೇ ಬಾರಿಗೆ
ಮೂರು ಸ್ತೋತ್ರಗಳನ್ನು ಪಠಣ ಮಾಡಿದರು.
ಬೃಹತ್ ವೇದಿಕೆ ನಿರ್ಮಾಣವಾಗಿತ್ತು. ಪಟ್ಟಣ ಮತ್ತು ಗುರು ಭವನಕ್ಕೆ ತೆರಳುವ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು.
ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳು ಹಾಗೂ ವಿವಿಧ ಪೀಠಾಧಿಪತಿಗಳನ್ನು ವಾದ್ಯಗೋಷ್ಠಿ, ಛತ್ರಿ, ಚಾಮರ, ಆನೆ, ಅಶ್ವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು.
ಭಾರತೀತೀರ್ಥ ಸ್ವಾಮೀಜಿ ಅವರು ಶಂಕರಚಾರ್ಯ ವಿರಚಿತ ಶಿವ ಪಂಚಾಕ್ಷರಿ ಸ್ತೋತ್ರವನ್ನು ಭಕ್ತರಿಗೆ ಹೇಳುವ ಮೂಲಕ ಚಾಲನೆ ನೀಡಿದರು. ವಿಧುಶೇಖರ ಭಾರತೀ ಸ್ವಾಮೀಜಿ ಕಲ್ಯಾಣವೃಷ್ಠಿಸ್ತವ ಮತ್ತು ಲಕ್ಷ್ಮೀನರಸಿಂಹ ಕರಾವಲಂಭ ಸ್ತೋತ್ರ ಹೇಳಿಕೊಡುವ ಮೂಲಕ ಸ್ತೋತ್ರ ಪಾರಾಯಣಕ್ಕೆ ಚಾಲನೆ ನೀಡಿದರು.
ಕೋಟಿ ಹರಿಹರ ನಾಮಮೃತ ಲೇಖನ ಯಜ್ಞವನ್ನು ಆಗಮಿಸಿದ್ದ ಸ್ವಾಮೀಜಿಗಳು ಹಾಗೂ ಭಕ್ತಾದಿಗಳು, ವಿದ್ಯಾರ್ಥಿಗಳು 108 ಬಾರಿ ಬರೆಯುವ ಮೂಲಕ ಯಜ್ಞದಲ್ಲಿ ಪಾಲ್ಗೊಂಡರು.
ಶಾರದಾ ಪೀಠದ ಗುರು ವಿಧುಶೇಖರ ಭಾರತೀ ಸ್ವಾಮೀಜಿ, ‘ಸ್ತೋತ್ರ ಎಂದರೆ ಭಗವಂತನ ಜೊತೆ ಮಾತನಾಡುವ ಮಾತು. ಸ್ತೋತ್ರವನ್ನು ಪಠಿಸುವುದರಿಂದ 3 ನದಿಗಳಲ್ಲಿ ಸ್ನಾನ ಮಾಡಿ, ಪುಣ್ಯ ಮಾಡಿದ ಹಾಗೆ. ಭಗವಂತನನ್ನು ಆಶ್ರಯಿಸಿದವರಿಗೆ ಅನುಗ್ರಹ ಮಾಡುತ್ತಾರೆ’ ಎಂದು ಹೇಳಿದರು.
ಆದಿ ಶಂಕರಾಚಾರ್ಯರು ದ್ವೈತವಲ್ಲದ ಅಸ್ತಿತ್ವದ ಏಕತೆಯ ಕಾಲಾತೀತ ಸತ್ಯವನ್ನು ಬೋಧಿಸಿದರು. ಅವರ ಪ್ರಕಾರ ಅಂತಿಮ ವಾಸ್ತವವೆಂದರೆ ಬ್ರಹ್ಮ, ಶಾಶ್ವತ, ಅನಂತ ಮತ್ತು ನಿರಾಕಾರ ಪ್ರಜ್ಞೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ‘ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ, ನಮ್ಮ ಮಠಗಳನ್ನು ಕಾಪಡಿಕೊಳ್ಳಬೇಕು. ಧರ್ಮ ಕಾಪಾಡುವ ಮಠಕ್ಕೆ ನಮ್ಮ ಕೈಲಾದ ನೆರವು ನೀಡಬೇಕು. ಇದು ನಮ್ಮೆಲ್ಲರ ಕರ್ತವ್ಯ’ ಎಂದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ ಭಾರತೀ ಸ್ವಾಮೀಜಿ, ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಪರಮಾನಂದ ಮಹಾರಾಜ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಮಾಧವಾನಂದ ಭಾರತೀ ಸ್ವಾಮೀಜಿ, ಸಚ್ಚಿದಾನಂದ ಭಾರತೀ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ವಾಮನಾಶ್ರಮ ಸ್ವಾಮೀಜಿ, ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಶಾಸಕರಾದ ಟಿ.ಡಿ.ರಾಜೇಗೌಡ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ,ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.