ADVERTISEMENT

ಶೃಂಗೇರಿ: ತುಂಗಾ ನದಿ– ತಾಂತ್ರಿಕ ಸಮಸ್ಯೆ ಸರಿಪಡಿಸಿದರೆ ನೀರಿಗಿಲ್ಲ ಕೊರತೆ

ಶೃಂಗೇರಿ: ತುಂಗಾ ನದಿ ಆಸರೆ, ನೀರಿಗಿಲ್ಲ ಕೊರತೆ; ನೀರು ಶುದ್ಧೀಕರಣಕ್ಕೆ ಬೇಕು ಕ್ಲೋರಿನೇಟರ್ ಯಂತ್ರ

ರಾಘವೇಂದ್ರ ಕೆ.ಎನ್
Published 26 ಫೆಬ್ರುವರಿ 2026, 6:55 IST
Last Updated 26 ಫೆಬ್ರುವರಿ 2026, 6:55 IST
<div class="paragraphs"><p>ಶೃಂಗೇರಿ ಪಟ್ಟಣ ಮತ್ತು ಎರಡು ಗ್ರಾಮ ಪಂಚಾಯಿತಿಯ ಕೆಲವು ಮನೆಗಳಿಗೆ ನೀರು ಸರಬರಾಜು ಮಾಡಲು ತುಂಗಾನದಿಯ ಪಂಪ್‍ಸೆಟ್ ಜಾಗ್‍ವೇಲ್ ಮತ್ತು ಬಾವಿ ನಿರ್ಮಿಸಿರುವುದು&nbsp;&nbsp;</p></div>

ಶೃಂಗೇರಿ ಪಟ್ಟಣ ಮತ್ತು ಎರಡು ಗ್ರಾಮ ಪಂಚಾಯಿತಿಯ ಕೆಲವು ಮನೆಗಳಿಗೆ ನೀರು ಸರಬರಾಜು ಮಾಡಲು ತುಂಗಾನದಿಯ ಪಂಪ್‍ಸೆಟ್ ಜಾಗ್‍ವೇಲ್ ಮತ್ತು ಬಾವಿ ನಿರ್ಮಿಸಿರುವುದು  

   

ಶೃಂಗೇರಿ: ತಾಲ್ಲೂಕಿನಲ್ಲಿ ಹರಿಯುವ ತುಂಗಾ ನದಿ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಆಸರೆಯಾಗಿದೆ. ಕೆಲವು ಮನೆಗಳು ಸ್ವಂತ ಬಾವಿ ಹೊಂದಿವೆ. ಪಟ್ಟಣದಲ್ಲಿ ತಾಂತ್ರಿಕ ಕಾರಣ ಹೊರತುಪಡಿಸಿ ವರ್ಷ ಪೂರ್ತಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಶುದ್ಧೀಕರಣ ಘಟಕ ಇದ್ದು, ಅದರ ಕ್ಲೋರಿನೇಟರ್ ಯಂತ್ರ ಹಾಳಾಗಿದೆ.

ಪಟ್ಟಣದಲ್ಲಿ 1,298 ಮನೆಗಳಿದ್ದು, 1,045 ಮನೆಗೆ ನೀರಿನ ಸಂಪರ್ಕ ಇದೆ. 2 ಗ್ರಾಮ ಪಂಚಾಯಿತಿ ಪ್ರದೇಶಗಳಿಗೂ ಪ್ರತಿದಿನ 7 ಲಕ್ಷ ಲೀಟರ್‌ವರೆಗೂ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿದ್ದರೂ, ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ, ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪಟ್ಟಣದಲ್ಲಿ ಶುದ್ದಗಂಗಾ ನೀರಿನ ಘಟಕ ಅಗತ್ಯ ಇದೆ. ಕುರುಬಕೇರಿಯಲ್ಲಿ ಶುದ್ದಗಂಗಾ ನೀರಿನ ಘಟಕ ಇದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ.

ADVERTISEMENT

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯ ಶಾರದಾ ಮಠದ ಹತ್ತಿರ ತುಂಗಾ ನದಿಯಿಂದ ನೀರನ್ನು ಎತ್ತಲು ₹8 ಲಕ್ಷ ವ್ಯಯಿಸಿ ಬಾವಿ ನಿರ್ಮಾಣ ಮಾಡಿ ಅದರಿಂದ ಈಶ್ವರಗಿರಿಯಲ್ಲಿ, ಹನುಮಂತ ನಗರದಲ್ಲಿ ಟ್ಯಾಂಕ್‍ಗಳಲ್ಲಿ ಶೇಖರಣೆ ಮಾಡಿ ಜನರಿಗೆ ನೀರು ಒದಗಿಸಲಾಗುತ್ತೀದೆ. ಶೇಖರಣಾ ಘಟಕದಲ್ಲಿ ಬ್ಲೀಚಿಂಗ್, ಆಲಂ ಬಳಸಿ ನೀರನ್ನು ಶುದ್ಧಿಕರಿಸಲಾಗುತ್ತಿದೆ. ಕುಡಿಯುವ ನೀರಿನ ಶುದ್ಧಿಕರಣ ಘಟಕದಲ್ಲಿ ಕ್ಲೋರಿನೇಟರ್ ಯಂತ್ರ ಹಾಳಾಗಿದೆ. ಇದರಿಂದ ನೀರು ಪರಿಪೂರ್ಣವಾಗಿ ಶುದ್ಧವಾಗುವುದಿಲ್ಲ. ಇದರಿಂದ ಖಾಯಿಲೆಗಳು ಹರಡುವ ಸಂಭವ ಇದೆ.

ಪಟ್ಟಣದ ಎರಡು ಕಡೆ ಟ್ಯಾಂಕ್‍ಗಳನ್ನು ನಿರ್ಮಿಸಿ, ಟ್ಯಾಂಕುಗಳಿಗೆ ಪ್ರತಿದಿನ 16 ಗಂಟೆ ನೀರು ಪೂರೈಕೆ ಮಾಡಿ, ಪಟ್ಟಣದ 11 ವಾರ್ಡ್‍ಗಳು, 2 ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಸಲಾಗುತ್ತದೆ. ಅಂಗಡಿ, ಹೋಟೆಲ್‍ಗಳಿಗೆ ಈ ನೀರನ್ನು ಬಳಕೆ ಮಾಡಲಾಗುತ್ತಿದೆ.

ಕುಡಿಯುವ ನೀರನ್ನು ಶೇಖರಣೆ ಮಾಡಲು ವಿದ್ಯುತ್ ಸಮಸ್ಯೆಯಿಂದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ಕುಡಿಯುವ ನೀರಿನ ಶೇಖರಣ ಘಟಕವೂ ಶುದ್ಧವಾಗಿದ್ದು, ಆಲಂ ಬಳಸಿ ನೀರು ಶುದ್ಧಿಕರಣ ಮಾಡುವುದರಿಂದ ಟ್ಯಾಂಕ್‌ನ ಫಿಲ್ಟರ್ ಬೇಡ್‍ ಅನ್ನು ಪ್ರತಿನಿತ್ಯ ಸ್ವಚ್ಛಗೊಳಿಬೇಕು. ಒಂದು ಮಳೆ ಬಂದರೆ ವಿದ್ಯಾರಣ್ಯಪುರದ ಯಕ್ಕನಹಳ್ಳದಲ್ಲಿ ನೀರು ಕೆಂಪಾಗಿ ಹರಿಯುತ್ತದೆ. ಆ ನೀರು ಈಗ ಪಟ್ಟಣಕ್ಕೆ ಸರಬರಾಜು ಮಾಡುವ ಬಾವಿಯ ಹತ್ತಿರ ಬರುತ್ತದೆ. ಅದೇ ನೀರು ಪಟ್ಟಣಕ್ಕೆ ಸರಬರಾಜು ಆಗುತ್ತದೆ. ಇದರಿಂದ ಪಟ್ಟಣಕ್ಕೆ ಶುದ್ಧ ನೀರು ಸೀಗುತ್ತಿಲ್ಲ. ಇದರಿಂದ ರೋಗಾಣುಗಳು ಹರಡುವುದು ಖಂಡಿತ ಎಂದು ಸ್ಥಳೀಯರಾದ ಸುಮಂತ್ ಹೇಳಿದರು.

‘ಕೇಂದ್ರ ಸರ್ಕಾರದ ಜಲ್‍ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶ, ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಪಟ್ಟಣದ ಎಲ್ಲಾ ಕಡೆ ನೀರಿನ ಮೂಲ ಗುರುತಿಸದೆ ಕಾಮಗಾರಿ ನಡೆದಿದೆ. ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದುವರೆಗೂ ನೀರು ಪೂರೈಕೆಯಾಗಿಲ್ಲ’ ಎಂದು ಸ್ಥಳೀಯರಾದ ಕಣದಮನೆ ಜಗದೀಶ್ ಆರೋಪಿಸಿದರು.

‘ಮೇನಲ್ಲಿ ಕಾಮಗಾರಿ ಪೂರ್ಣ’

ಅಮೃತ್ ನಗರ ನಿರ್ಮಲ್ ನಗರ ಯೋಜನೆಯಲ್ಲಿ ₹3.34 ಕೋಟಿ ಅನುದಾನದಲ್ಲಿ ವಿದ್ಯಾರಣ್ಯಪುರದ ಯಕ್ಕನಹಳ್ಳದ ಮೇಲ್ಭಾಗದಲ್ಲಿ ಪಂಪ್ ಸ್ಥಾವರ ಸ್ಥಾಪನೆ ನೀರು ಶುದ್ಧೀಕರಣ ಯಂತ್ರ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಪ್ರತಿ ಮನೆಗೂ ಮೀಟರ್ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಮುಗಿದಿದೆ. ಇದನ್ನು ಮೇ ತಿಂಗಳಲ್ಲಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು. ಆಗ ಪಟ್ಟಣಕ್ಕೆ ನೀರಿನ ಕೊರತೆ ಆಗುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸರಸ್ವತಿ ಷಣ್ಮುಗ ಸುಂದರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.