ADVERTISEMENT

ಸೆ.27ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

ಜಿಲ್ಲೆಯಲ್ಲಿ ಒಟ್ಟು 1,192 ಪರೀಕ್ಷಾರ್ಥಿಗಳು, 11 ಪರೀಕ್ಷಾ ಕೇಂದ್ರಗಳು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:45 IST
Last Updated 25 ಸೆಪ್ಟೆಂಬರ್ 2021, 16:45 IST
ಕೆ.ಎನ್.ರಮೇಶ್
ಕೆ.ಎನ್.ರಮೇಶ್   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದೇ 27 ಮತ್ತು 29ರಂದು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಪೂರ್ಣ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಇಲ್ಲಿ ಶನಿವಾರ ಹೇಳಿದರು.

‘ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿವೆ. 27ರಂದು ಗಣಿತ, ವಿಜ್ಞಾನ, ಸಮಾಜ, 29ರಂದು ಪ್ರಥಮ, ದ್ವಿತೀಯ, ತೃತೀಯ ಭಾಷಾ ಪರೀಕ್ಷೆಗಳು ನಡೆಯಲಿವೆ. ಜಿಲ್ಲೆಯಲ್ಲಿ 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಒಂದು ಕೊಠಡಿಗೆ ಗರಿಷ್ಠ 12 ಪರೀಕ್ಷಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಅನಾರೋಗ್ಯ ಪೀಡಿತ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಹಾಗೂ ಕೋವಿಡ್‌ ದೃಢಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್‌ಕೇರ್‌ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕಿಗೆ ತಲಾ ಒಂದು ಆಂಬುಲೆನ್ಸ್‌ ಕಾಯ್ದಿರಿಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಒಟ್ಟು 1,192 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿ ದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 478, ತರೀಕೆರೆಯಲ್ಲಿ 188, ಕಡೂರು 148, ಮೂಡಿಗೆರೆ 109, ಬೀರೂರು 88, ಕೊಪ್ಪ 70, ಶೃಂಗೇರಿ 44, ನರಸಿಂಹರಾಜಪುರದಲ್ಲಿ 67 ಪರೀಕ್ಷಾರ್ಥಿಗಳು ಇದ್ದಾರೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಮಾತನಾಡಿ, ‘ಜಿಲ್ಲೆಯಲ್ಲಿ ಬಂದ್ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಸರ್ಕಾರಿ ಕಚೇರಿಗಳು ಎಂದಿನಿಂತೆ ಕಾರ್ಯ ನಿರ್ವಹಿಸಲಿವೆ. ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸುವಂತಿಲ್ಲ. ವರ್ತಕರು ನಿರ್ಭಯವಾಗಿ ಅಂಗಡಿ ತೆರೆಯಬಹುದು. ಪೊಲೀಸ್ ಭದ್ರತೆ ಇರುತ್ತದೆ’ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ವಿ.ಮಲ್ಲೇಶಪ್ಪ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಇದ್ದರು.

‘ಬಂದ್‌: ಯಾವುದೇ ಆತಂಕ ಬೇಡ’

ಇದೇ 27ರಂದು ವಿವಿಧ ಸಂಘಟನೆಗಳು ಬಂದ್ ಕರೆ ನೀಡಿದ್ದು, ಪರೀಕ್ಷಾರ್ಥಿಗಳು ಮತ್ತು ಪೋಷಕರ ಆತಂಕ ಪಡುವ ಅಗತ್ಯ ಇಲ್ಲ. ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇರುತ್ತದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಭಾಗದಲ್ಲಿ ಖಾಸಗಿ ಬಸ್‌ಗಳು ಸಂಚರಿಸಲಿವೆ. ಪರೀಕ್ಷಾರ್ಥಿಗಳಿಗೆ ತೊಂದರೆ ಉಂಟಾದಲ್ಲಿ ಪೊಲೀಸ್ ತುರ್ತು ಸಹಾಯವಾಣಿ 112 ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು. ಅವರು ಸಮಸ್ಯೆ ಬಗೆಹರಿಸುವರು ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಹೇಳಿದರು.

ಶೈಕ್ಷಣಿಕ ವಲಯವಾರು ಸಹಾಯವಾಣಿ ಸಂಖ್ಯೆ: ಬೀರೂರು– 9480695128, ಚಿಕ್ಕಮಗಳೂರು– 9480695129, ‌ಕಡೂರು– 9480695130, ಕೊಪ್ಪ– 9480695131, ಮೂಡಿಗೆರೆ– 9480695132, ನರಸಿಂಹರಾಜಪುರ– 9480695133, ಶೃಂಗೇರಿ– 9480695134, ತರೀಕೆರೆ– 9480695135 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.