ADVERTISEMENT

ಸಿಂಗಟಗೆರೆ: ಶತಮಾನ ಕಂಡ ಶಾಲೆಗೆ ‘ಪುಷ್ಟಿ’ ಬಲ

ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸಂಘಟಿತ ಪ್ರಯತ್ನದಿಂದ ಮಾದರಿಯಾದ ವಿದ್ಯಾದೇಗುಲ

ಬಾಲು ಮಚ್ಚೇರಿ
Published 5 ಏಪ್ರಿಲ್ 2025, 7:09 IST
Last Updated 5 ಏಪ್ರಿಲ್ 2025, 7:09 IST
ಸಿಂಗಟಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ಸಿಂಗಟಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ   

ಕಡೂರು: ತಾಲ್ಲೂಕಿನ ಸಿಂಗಟಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ‌ ಶಾಲೆಯ ‘ಎಸ್‌ಡಿಎಂಸಿ’ಗೆ ರಾಜ್ಯ ಸರ್ಕಾರದ ಪುಷ್ಟಿ ಪ್ರಶಸ್ತಿ ಲಭಿಸಿದೆ.

ಶತಮಾನ ಕಂಡ ಶಾಲೆ ಇದಾಗಿದೆ. ಆದರೆ, ಆರೇಳು ವರ್ಷಗಳ ಹಿಂದೆ ಈ ಶಾಲೆ ದುಃಸ್ಥಿತಿಗೆ ತಲುಪಿತ್ತು. ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಆಗ  ಶಾಲೆಯ ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ನಡೆಸಿದ ಚಿಂತನೆಯ ಫಲವಾಗಿ ಈಗ ಶಾಲೆ ಮಾದರಿ ವಿದ್ಯಾದೇಗುಲವಾಗಿ ತಲೆ ಎತ್ತಿ ನಿಂತಿದೆ.

ಶಾಲೆಯಲ್ಲಿ 1 ರಿಂದ 6ನೇ ತರಗತಿವರೆಗೆ ಇಂಗ್ಲೀಷ್ ಮಾಧ್ಯಮ ಮತ್ತು 1 ರಿಂದ 7ರವರೆಗೆ ಕನ್ನಡ ಮಾಧ್ಯಮ ತರಗತಿಗಳಿವೆ. ಎಲ್.ಕೆ.ಜಿ ಮತ್ತು ಯು‌ಕೆ.ಜಿ. ಸೌಲಭ್ಯವೂ ಇಲ್ಲಿದೆ. 13 ಕೊಠಡಿಗಳಿವೆ. 3 ಸ್ಮಾರ್ಟ್ ಕ್ಲಾಸ್‌ಗಳಿವೆ. ವೈ–ಫೈ ಸೌಲಭ್ಯವಿದೆ. ವಿಜ್ಞಾನ ಮಾದರಿಗಳ 90  ಜತೆ  ಆಧುನಿಕ ಉಪಕರಣಗಳನ್ನು ಒಳಗೊಂಡ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವೂ ಶಾಲೆಯಲ್ಲಿದೆ.

ADVERTISEMENT

ಶಾಲೆಯಲ್ಲಿ 8 ಶಿಕ್ಷಕರಿದ್ದು, 6 ಗೌರವ ಶಿಕ್ಷಕರಿದ್ದಾರೆ. ಒಟ್ಟು 170 ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ಗುರುವಾರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಏರ್ಪಡಿಸಿ ಸ್ಪರ್ಧಾಮನೋಭಾವ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

ಶಾಲೆಯಲ್ಲಿ ಈಗಿರುವ ಸೌಲಭ್ಯಗಳ ಹಿಂದೆ ಹಳೆಯ ವಿದ್ಯಾರ್ಥಿಗಳ ಕೊಡುಗೆ ಸಾಕಷ್ಟಿದೆ. ಇಲ್ಲಿ ಓದಿ ಬೇರೆ ಬೇರೆ ವೃತ್ತಿಯಲ್ಲಿರುವ ವಿದ್ಯಾರ್ಥಿಗಳು, ಪೋಷಕರು ಮತ್ತು ಸರ್ಕಾರದ ಅನುದಾನದಲ್ಲಿ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ₹6 ಲಕ್ಷ ವೆಚ್ಚದಲ್ಲಿ ಮಹಾದ್ವಾರ, ₹16 ಲಕ್ಷ ವೆಚ್ಚದಲ್ಲಿ ದಾಸೋಹ ಭವನ, ₹6 ಲಕ್ಷ ವೆಚ್ಚದಲ್ಲಿ ಪಾರ್ಕ್, ವಿದ್ಯಾರ್ಥಿಗಳಿಗಾಗಿ ನಾಲ್ಕು ಹೈಟೆಕ್ ಶೌಚಾಲಯ, . ರಂಗಮಂದಿರ ನಿರ್ಮಾಣಗೊಂಡಿವೆ. ಶಾಲೆಯ ಗೋಡೆಯಲ್ಲಿ  ನಾಡಿನ ಪ್ರವಾಸಿ ತಾಣಗಳು, ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ.

ಶಾಲೆ ಶತಮಾನ ಕಂಡಿದ್ದು, ಹೊಸ ಕಟ್ಟಡದ ಅವಶ್ಯಕತೆಯಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕೊರತೆಯಿಲ್ಲ. ಏನೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಲು ಶಾಲಾಭಿವೃದ್ಧಿ ಸಮಿತಿ ಸದಾ ಸಿದ್ಧವಾಗಿದೆ. ಎಲ್ಲ ಸದಸ್ಯರು ಸಮಾನ ಮನಸ್ಕ ಚಿಂತನೆಯಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ’ ಎಂದು ಮುಖ್ಯ ಶಿಕ್ಷಕಿ ಜಯಂತಿ ಹೇಳಿದರು. 

ನಾನು ಓದಿದ ಶಾಲೆ ಇದು. ಪ್ರಶಸ್ತಿ ದೊರೆತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಶಾಲೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸ್ಫೂರ್ತಿ ಲಭಿಸಿದೆ
ಗಿರೀಶಾರಾಧ್ಯ, ಅಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ
ನಮ್ಮ ಕ್ಲಸ್ಟರ್‌ನಲ್ಲಿ ಸಮಗ್ರವಾಗಿ ಅಭಿವೃದ್ಧಿಯಾದ ಶಾಲೆ ಇದೆ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ.
ಸಿ.ಆರ್.ಪ್ರಿಯಾ, ಸಿ.ಆರ್.ಪಿ. ಸಿಂಗಟಗೆರೆ ಕ್ಲಸ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.