ADVERTISEMENT

ಪತ್ನಿ ಹತ್ಯೆ ಪ್ರಕರಣ ತನಿಖೆ ಚುರುಕು; ಇತ್ತ ರೈಲು ಹಳಿಯ ಮೇಲೆ ಪತಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 16:53 IST
Last Updated 22 ಫೆಬ್ರುವರಿ 2020, 16:53 IST
ಡಾ.ರೇವಂತ್‌, ಕವಿತಾ
ಡಾ.ರೇವಂತ್‌, ಕವಿತಾ   
""

ಕಡೂರು (ಚಿಕ್ಕಮಗಳೂರು): ಪತ್ನಿ ಹತ್ಯೆ ತನಿಖೆ ಶುರುವಾದ ಬೆನ್ನಲ್ಲೇ ಪತಿ ದಂತವೈದ್ಯ ರೇವಂತ್‌ ತಾಲ್ಲೂಕಿನ ಬಂಡಿಕೊಪ್ಪಲು ರೈಲ್ವೆ ಗೇಟಿನ ಹಳಿಯಲ್ಲಿ ರಕ್ತಸಿಕ್ತಸ್ಥಿತಿಯಲ್ಲಿ ಶವವಾಗಿ ಶನಿವಾರ ಮಧ್ಯಾಹ್ನ ಪತ್ತೆಯಾಗಿದ್ದಾರೆ.

ರೈಲಿಗೆ ಸಿಲುಕಿ ರೇವಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ . ಅರಸೀಕೆರೆ ರೈಲ್ವೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಇದೇ 17ರಂದು ರೇವಂತ್‌ ಅವರ ಪತ್ನಿ ಕವಿತಾ ಹತ್ಯೆ ನಡೆದಿತ್ತು. ಕತ್ತುಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವು ಕಡೂರು ಪಟ್ಟಣವನ್ನೇ ಬೆಚ್ಚಿ ಬೀಳಿಸಿತ್ತು. ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿ, ಚುರುಕುಗೊಳಿಸಿದ್ದರು. ರೇವಂತ್‌ ಅವರನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದರು.

ADVERTISEMENT

ಕವಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಮಾಹಿತಿ ಕಲೆ ಹಾಕಲಾಗಿತ್ತು. ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ರೇವಂತ್ ಮೇಲೂ ಸಂಶಯ ಇತ್ತು. ಆತನನ್ನು ವಿಚಾರಣೆ ಮಾಡುವುದು ಬಾಕಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿಯ ಲಕ್ಷ್ಮಿನಗರದ ವನಜಮ್ಮ ಮತ್ತು ಬಸವರಾಜಪ್ಪ ದಂಪತಿ ಪುತ್ರಿ ಕವಿತಾ ಮತ್ತು ಕಡೂರಿನ ಡಾ.ರೇವಂತ್‌ ಅವರು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ರೇವಂತ್‌ ಬೀರೂರಿನಲ್ಲಿ ತಿರುಮಲ ಸ್ಮೈಲ್ಸ್ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದರು. ದಂಪತಿಗೆ ಇಬ್ಬರು ಪುತ್ರರು (ಆರು ತಿಂಗಳಿನ ಕೂಸು, ಐದು ವರ್ಷದ ಮಗು) ಇದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.