ADVERTISEMENT

ತರೀಕೆರೆ ಬಸ್ ನಿಲ್ದಾಣದಲ್ಲಿ ಅಕ್ರಮ ಶೆಡ್‌ ನಿರ್ಮಾಣ: ತೆರವುಗೊಳಿಸಲು ದಸಂಸ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:06 IST
Last Updated 21 ಆಗಸ್ಟ್ 2025, 5:06 IST
ಎಚ್.ಎಸ್. ರಾಜಪ್ಪ
ಎಚ್.ಎಸ್. ರಾಜಪ್ಪ   

ತರೀಕೆರೆ: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಮತ್ತು ಮಹಾತ್ಮಗಾಂಧಿ ಪಾರ್ಕ್ ಪಕ್ಕದಲ್ಲಿರುವ ದಿ. ಬಿ.ಆರ್. ನೀಲಕಂಠಪ್ಪರವರ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಎಚ್.ಎಸ್. ರಾಜಪ್ಪ ಆರೋಪಿಸಿದ್ದಾರೆ.

2014–15ನೇ ಸಾಲಿನಲ್ಲಿ ಈಗಿನ ಶಾಸಕ ಜಿ.ಎಚ್. ಶ್ರೀನಿವಾಸ್‌ ಅವರ ಶಾಸಕರ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಪುರಸಭೆ ಅನುದಾನದಡಿ ಮಾಜಿ ಶಾಸಕ ದಿ. ಬಿ.ಆರ್.ನೀಲಕಂಠಪ್ಪರವರ ಸ್ಮರಣಾರ್ಥವಾಗಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಇದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆರ್.ವಿ. ದೇಶಪಾಂಡೆ ಅವರು ಉದ್ಘಾಟಿಸಿದ್ದರು.

ತರೀಕೆರೆ ಬಸ್‍ ನಿಲ್ದಾಣದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿರುವುದು

ಆದರೆ, ಗುತ್ತಿಗೆದಾರರು ನಿಲ್ದಾಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಿಲ್ದಾಣದ ಮುಂಭಾಗದಲ್ಲಿ ಹತ್ತಾರು ಶೆಡ್‌ಗಳನ್ನು ನಿರ್ಮಿಸಿ, ಅವುಗಳನ್ನು ಮೂರನೇ ವ್ಯಕ್ತಿಗಳಿಗೆ ಬಾಡಿಗೆ ರೂಪದಲ್ಲಿ ಕೊಡುತ್ತಿದ್ದಾರೆ. ಈ ಕುರಿತು ಪುರಸಭೆಯಾಗಲೀ, ತಾಲ್ಲೂಕು ಆಡಳಿತವಾಗಲೀ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾರಣ ಖಾಸಗಿ ವ್ಯಕ್ತಿಗಳೊಂದಿಗೆ ಸರ್ಕಾರಿ ವ್ಯಕ್ತಿಗಳು ಸಹ ಸಾಮಿಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಅಲ್ಲದೆ ತಾಲ್ಲೂಕು ಕಚೇರಿಯ ಮುಂಭಾಗದಲ್ಲೂ ನಾಯಿಕೊಡೆಗಳಂತೆ ಶೆಡ್‍ಗಳು ನಿರ್ಮಾಣ ಮಾಡಿಕೊಂಡಿರುತ್ತಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇಂತಹವರ ಮೇಲೆ ಸೂಕ್ತ ಕ್ರಮ ಕೈಗೊಂಡು, ಅಕ್ರಮವಾಗಿ ನಿರ್ಮಿಸಿಕೊಂಡಿರುವ ಶೆಡ್‌ಗಳನ್ನು ತೆರವುಗೊಳಿಸಿಬೇಕೆಂದು ಸಮಿತಿ ಪರವಾಗಿ ರಾಜಪ್ಪ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.