ADVERTISEMENT

ಕೇಂದ್ರದ ಮಾದರಿ ವೇತನ ನಿಗದಿ ಮಾಡಿ

ಶೈಕ್ಷಣಿಕ ಕಾರ್ಯಾಗಾರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 2:09 IST
Last Updated 9 ಫೆಬ್ರುವರಿ 2021, 2:09 IST
ಬೀರೂರಿನ ಎಸ್.ರಾಧಾಕೃಷ್ಣನ್ ಗುರುಭವನದಲ್ಲಿ ಸೋಮವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾಟನೆ, ಶೈಕ್ಷಣಿಕ ಕಾರ್ಯಾಗಾರ ಮತ್ತು ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿದರು.     
ಬೀರೂರಿನ ಎಸ್.ರಾಧಾಕೃಷ್ಣನ್ ಗುರುಭವನದಲ್ಲಿ ಸೋಮವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾಟನೆ, ಶೈಕ್ಷಣಿಕ ಕಾರ್ಯಾಗಾರ ಮತ್ತು ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿದರು.        

ಬೀರೂರು: ‘ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನ ನಿಗದಿ ಪಡಿಸುವಂತೆ ನೌಕರರ ಒಕ್ಕೂಟ ಹಕ್ಕೊತ್ತಾಯ ಮಂಡಿಸಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ಶಿಕ್ಷಕರ ಸಂಘದ ಕಚೇರಿ ಉದ್ಘಾಟನೆ, ಶೈಕ್ಷಣಿಕ ಕಾರ್ಯಾಗಾರ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್-19 ಕಾಲಘಟ್ಟದಲ್ಲಿ ರಾಜ್ಯ ಸರ್ಕಾರ ಎಲ್ಲ ನೌಕರರ ವೇತನ ದಲ್ಲಿ ಶೇ 40ರಷ್ಟು ಕಡಿತಗೊಳಿಸಲು ಮುಂದಾಗಿತ್ತು. ಆದರೆ, ನೌಕರರ ಸಂಘದ ಮನವಿಗೆ ಸ್ಪಂದಿಸಿ ಮುಖ್ಯ ಮಂತ್ರಿ ಈ ಆದೇಶವನ್ನು ಜಾರಿ ಮಾಡಲಿಲ್ಲ. ಕೇಂದ್ರ ಸರ್ಕಾರದಿಂದ ತುಟ್ಟಿಭತ್ಯೆ ಬಿಡುಗಡೆ ಮಾಡಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವ ಭರವಸೆ ನೀಡಿದ್ದಾರೆ. ಸರ್ಕಾರಿ ನೌಕರರ ದಿನಾಚರಣೆಗೆ ಅನುವು ಮಾಡಿಕೊಟ್ಟಿದ್ದು, ಏಪ್ರಿಲ್ 21 ದಿನವನ್ನು ನಿಗದಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘2022-23ನೇ ಸಾಲಿಗೆ ಇನ್ನೊಂದು ವೇತನ ಆಯೋಗ ರಚಿಸಬೇಕು. ಶಿಕ್ಷಕರು ಮತ್ತು ಸರ್ಕಾರಿ ನೌಕರರು ನೆಮ್ಮದಿಯ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು. ನೌಕರರು ಮತ್ತು ಕುಟುಂಬದವರಿಗೆ ಔಷಧ ಸಹಿತ ನಗದುರಹಿತ ಚಿಕಿತ್ಸೆ ಲಭ್ಯವಾಗಬೇಕು. ಎನ್‍ಪಿಎಸ್ ಪದ್ಧತಿ ಕೈಬಿಟ್ಟು, ಹಳೆಯ ಪಿಂಚಣಿ ಮಾದರಿ ಮತ್ತೆ ಜಾರಿಗೆ ಬರಬೇಕು. 78 ಇಲಾಖೆಗಳ ಪೈಕಿ ಅತಿಹೆಚ್ಚು ಸಮಸ್ಯೆ ಎದುರಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ತೊಂದರೆ ಬಗೆಹರಿಸಬೇಕು ಎನ್ನುವುದು ನಮ್ಮ ಸಂಘದ ಬೇಡಿಕೆಯಾಗಿದೆ’ ಎಂದು ಹೇಳಿದರು.

‘ಕೆಜಿಐಡಿ ಕಚೇರಿ ಕಂಪ್ಯೂಟರೀಕರಣಗೊಳಿಸಿ ನೌಕರರು ಸಾಲಕ್ಕಾಗಿ ಹೆಚ್ಚು ದಿನ ಕಾಯದಂತಹ ವ್ಯವಸ್ಥೆ ಜಾರಿಯಾಗುತ್ತಿದೆ. ಶಿಕ್ಷಕರೂ ಸೇರಿ ಎಲ್ಲ ನೌಕರರೂ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವ ಬದಲು, ಸರ್ಕಾರದ ಮಾನ್ಯತೆ ಇರುವ ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡುವ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳಬೇಕು’ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ‘ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಪದವೀಧರ ಶಿಕ್ಷಕರನ್ನು ಮುಂದಿನ ಹಂತಗಳಿಗೂ ಪರಿಗಣಿಸಬೇಕು. ಮಲೆನಾಡು ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಮೊದಲಿನಂತೆ ಗಿರಿಭತ್ಯೆ, ಗ್ರಾಮೀಣ ಭತ್ಯೆ ಮತ್ತೆ ದೊರೆಯುವಂತಾಗಬೇಕು. 1ರಿಂದ 5ನೇ ತರಗತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸಿ, ಮಧ್ಯಾಹ್ನ ಬಿಸಿಯೂಟ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ನಾಗನಗೌಡ, ಸಹ ಕಾರ್ಯದರ್ಶಿ ಸುಮತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ರಾಜಕುಮಾರ್, ರಂಗನಾಥ ಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಪೂರ್ಣೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಿ.ಜೆ ಮತ್ತು ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.