ADVERTISEMENT

2 ಗುಂಪುಗಳ ಹೊಡೆದಾಟದ ವೇಳೆ ಯುವಕ ಸಾವು: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 10:08 IST
Last Updated 9 ಏಪ್ರಿಲ್ 2021, 10:08 IST
   

ಚಿಕ್ಕಮಗಳೂರು: ಎರಡು ಗುಂಪುಗಳ ಹೊಡೆದಾಟದಲ್ಲಿ ಗಾಯಗೊಂಡಿದ್ದ ಗೌರಿಕಾಲುವೆಯ ಮನೋಜ್‌ (21) ಎಂಬಾತ ಮೃತಪಟ್ಟಿದ್ದು, ಮನೋಜ್‌ಗೆ ಹೊಡೆದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ, ವಿಶ್ವ ಹಿಂದು ಪರಿಷತ್‌, ಬಜರಂಗದಳ, ಶ್ರೀರಾಮಸೇನೆಯ ಸಂಘಟನೆಯವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 10.30ಕ್ಕೆ ಜಿಲ್ಲಾಸ್ಪತ್ರೆಯಿಂದ ಹೊರಟ ಪ್ರತಿಭಟನಾಕರರು ಎಂ.ಜಿ ರಸ್ತೆ ಮೂಲಕ ಹಾದು ಹನುಮಂತಪ್ಪ ವೃತ್ತ ತಲುಪಿದವರು. ಎಂ.ಜಿ ರಸ್ತೆಯಲ್ಲಿ ಅಂಗಡಿ, ಮಳಿಗೆಗಳ ಬಾಗಿಲು ಮುಚ್ಚಿಸಿದರು. ಸ್ವಲ್ಲ ಹೊತ್ತಿನ ನಂತರ ಅಂಗಡಿ,ಮಳಿಗೆಗಳವರು ಮತ್ತೆ ಬಾಗಿಲು ತೆರೆದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವರಾಜ್‌ ಶೆಟ್ಟಿ ಮಾತನಾಡಿ, ‘ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮನೋಜ್‌ ಅವರಿಗೆ ಹೊಡೆದು ಗಾಯಗೊಳಿಸಿದ್ದಾರೆ. ಕೃತ್ಯಕ್ಕೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಅವರಿಗೆ ಮನವಿ ಸಲ್ಲಿಸಲಾಯಿತು.

ಇಬ್ಬರು ಆರೋಪಿಗಳ ಬಂಧನ: ಎಸ್ಪಿ ಅಕ್ಷಯ್‌
ಹೊಡೆದಾಟ, ಮನೋಜ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಎಸ್ಪಿ ಅಕ್ಷಯ್‌ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ‘ಬುಧವಾರ ರಾತ್ರಿ 11 ಗಂಟೆ ಹೊತ್ತಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಮನೋಜ್‌ ತಲೆಗೆ ಏಟು ಬಿದ್ದು ತೀವ್ರ ಗಾಯವಾಗಿತ್ತು. ಅವರನ್ನು ಚಿಕಿತ್ಸೆಗೆ ಹಾಸನಕ್ಕೆ ಆಸ್ಪತ್ರೆಗೆ ಒಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಗುರುವಾರ ಬೆಂಗಳೂರಿನ ನಿಮ್ಹಾನ್ಸ್‌ಗೆ ಒಯ್ಯುವಾಗ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹಫ್ನಾನ್‌ನ ಸಹೋದರಿಯ ಜತೆ ಫರೀದ್‌ಗೆ ಎಂಬಾತಗೆ ಒಡನಾಟ ಇತ್ತು. ಫರೀದ್‌ಗೆ ಎಚ್ಚರಿಕೆ ನೀಡಲು ಹಫ್ನಾನ್‌ ತನ್ನ ಸ್ನೇಹಿತರಾದ ರಜಾಕ್‌, ನಿಹಾಲ್‌, ಮನೋಜ್‌ ಅವರನ್ನು ಬುಧವಾರ ರಾತ್ರಿ ಕರೆದೊಯ್ದಿದ್ದಾನೆ. ಫರೀದ್‌, ತೌಫಿಕ್‌, ತೌಶಿಕ್‌ ಜತೆಯಲ್ಲಿದ್ದರು. ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಹೊಡೆದಾಟವಾಗಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.