ಚಿಕ್ಕಮಗಳೂರು: ಮೂಡಿಗೆರೆ ಹ್ಯಾಂಡ್‌ಪೋಸ್ಟ್ –ಮೂಗ್ತಿಹಳ್ಳಿ (ಚಿಕ್ಕಮಗಳೂರು) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದ್ದು, 25 ಕಿ.ಮೀ ರಸ್ತೆ ಅಭಿವೃದ್ಧಿಗೆ 3,142 ಮರಗಳು ಬಲಿಯಾಗಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಮೂಡಿಗೆರೆ– ಚಿಕ್ಕಮಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಸಿದ್ಧಪಡಿಸಿರುವ 3ಡಿ ನಕ್ಷೆಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಎರಡನೇ ಹಂತದ 4 ಹೆಕ್ಟೇರ್ ಸ್ವಾಧೀನ ಸಂಬಂಧ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, 3ಡಿ ಅನುಮೋದನೆ ದೊರಕಬೇಕಿದೆ. ಈ ಅನುಮೋದನೆ ಲಭಿಸಿದರೆ ಸ್ವಾಧೀನವಾಗಲಿರುವ ಜಮೀನಿನ ಮಾಲೀಕರಿಗೆ ಭೂಸ್ವಾಧೀನಾಧಿಕಾರಿಗಳು ನೋಟಿಸ್ ನೀಡಲು ಆರಂಭಿಸಲಿದ್ದಾರೆ.
ಜೊತೆಯಲ್ಲೇ ಟೆಂಡರ್ ಬಿಡ್ ತೆರೆಯಲಾಗುತ್ತದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ತೆರವು ಕಾರ್ಯವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಸ್ವಾಧೀನ ಆಗಬೇಕಿರುವ ಭೂಮಿಯಲ್ಲಿ ಶೇ 90ರಷ್ಟು ದೊರೆತ ಬಳಿಕವೇ ಟೆಂಡರ್ ಬಿಡ್ ತೆರೆಯಬೇಕು ಎಂಬ ನಿಯಮ ಇದೆ. ಆದ್ದರಿಂದ ಪದೇ ಪದೇ ದಿನಾಂಕ ಮುಂದೂಡಲಾಗುತ್ತಿದೆ.
ಅಂದಾಜಿನ ಪ್ರಕಾರ ಜುಲೈ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಂಡರೆ ಆಗಸ್ಟ್‌ನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಒಟ್ಟು 10 ಮೀಟರ್ ಅಗಲದ ದ್ವಿಪಥ ಡಾಂಬರ್ ರಸ್ತೆ ನಿರ್ಮಾಣವಾಗಲಿದ್ದು, ಡಾಂಬರ್ ರಸ್ತೆ ಅಲ್ಲದೆ ಎರಡೂ ಕಡೆ ಜಾಗ ಅಗಲ ಮಾಡಲು ಉದ್ದೇಶಿಸಲಾಗಿದೆ. 67 ಮೋರಿಗಳು, ಎರಡು ಕಿರು ಸೇತುವೆಗಳು ನಿರ್ಮಾಣವಗಲಿವೆ. ಇದರ ಜತೆಗೆ 15 ಕಡೆ ಜಂಕ್ಷನ್ ಅಭಿವೃದ್ಧಿಗೊಳಿಸಲು ಯೋಜನೆಯಲ್ಲಿ ಅವಕಾಶ ನೀಡಲಾಗಿದೆ.
ಮೂಡಿಗೆರೆ ಪಟ್ಟಣದಲ್ಲಿ ರಸ್ತೆ ಹಾದು ಹೋಗಲಿದ್ದು, 25 ಕಿ.ಮೀ ಉದ್ದದ ರಸ್ತೆಯಲ್ಲಿ 28 ಕಡೆ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವುದು ಕೂಡ ವಿಸ್ತೃತ ಯೋಜನಾ ವರದಿಯಲ್ಲಿ ಸೇರ್ಪಡೆಯಾಗಿದೆ.
ರಸ್ತೆಯ ಎರಡೂ ಬದಿಯಲ್ಲಿ ಸಾಲು ಮರಗಳಿವೆ. ಅದರೊಂದಿಗೆ ಎರಡೂ ಬದಿಯಲ್ಲಿರುವ ಕಾಫಿ ತೋಟಗಳಲ್ಲೂ ಖಾಸಗಿಯವರ ಮರಗಳಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಇಡೀ ಯೋಜನೆಗೆ 3,142 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮರಗಳನ್ನು ಕಡಿತಲೆ ಮಾಡಲು ಅರಣ್ಯ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿದ್ದಾರೆ. ಮತ್ತೊಮ್ಮೆ ಮರಗಳನ್ನು ಗುರುತಿಸುವ ಮತ್ತು ಎಣಿಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಡೂರು ರಸ್ತೆಗೆ ಬಲಿಯಾಗಿದ್ದ 3455 ಮರ
ಈಗಾಗಲೇ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿರುವ ಚಿಕ್ಕಮಗಳೂರು– ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 3455 ಮರಗಳನ್ನು ಕಡಿಯಲಾಗಿತ್ತು. ಆದರೆ ಈ ರಸ್ತೆ ಬದಿಯಲ್ಲಿ ಮರಳಿ ಸಸಿಗಳನ್ನು ನೆಡುವ ಕಾರ್ಯ ಪೂರ್ಣವಾಗಿಲ್ಲ. ಒಂದು ಮರಕ್ಕೆ 10 ಸಸಿಗಳಂತೆ 34550 ಸಸಿಗಳನ್ನು ನೆಡಬೇಕಿದೆ. 2021ನೇ ಸಾಲಿನಲ್ಲಿ ಪ್ರತಿ ಕಿಲೋ ಮೀಟರ್‌ಗೆ 200 ಸಸಿಗಳಂತೆ ಕಡೂರಿನಿಂದ ಸಖರಾಯಪಟ್ಟಣದ ತನಕ 1426 ಸಸಿಗಳನ್ನು ನೆಡಲಾಗಿದೆ.
ಆದರೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಆ ಸಂದರ್ಭದಲ್ಲಿ ಸಸಿ ನೆಡದಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದರು. ಆದ್ದರಿಂದ ಆಗ ಸಸಿ ನೆಡುವ ಯೋಜನೆಯನ್ನು ಬೇರೆಡೆಗೆ ವರ್ಗಾಯಿಸಲಾಗಿತ್ತು. ಕಡೂರು–ಚಿಕ್ಕಮಗಳೂರು ರಸ್ತೆಯಲ್ಲಿ 7 ಕಿ.ಮೀ ದೊಡ್ಡಪ್ಪನಹಳ್ಳಿ–ಕುಂಕುನಾಡು–ಹೋಚಿಹಳ್ಳಿ ಗೇಟ್ ತನಕ 5 ಕಿ.ಮೀ ಮತ್ತು ಜಿ.ಮದಾಪುರ ಗೇಟ್–ಪುರ ಪಿ.ಮಲ್ಲಾಪುರ– ಚೌಳಹಿರಿಯೂರು ರಸ್ತೆ ನದಿ ಸೇತುವೆ ತನಕ 8 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಪ್ರತಿ ಹೆಕ್ಟೇರ್‌ಗೆ 400 ಸಸಿಗಳನ್ನು ನೆಟ್ಟು ಒಟ್ಟು 86.34 ಹೆಕ್ಟೇರ್‌ನಲ್ಲಿ 34500ಕ್ಕೂ ಹೆಚ್ಚು ಸಸಿಗಳನ್ನು ಪ್ಲಾಂಟೇಷನ್ ಮಾಡಲಾಗಿದೆ. ಸಸಿ ನೆಡುವ ಕಾರ್ಯಕ್ಕೆ ಹೊಸದಾಗಿ ಅನುದಾನ ಬಂದ ಕೂಡಲೇ ಕಡೂರು–ಚಿಕ್ಕಮಗಳೂರು ರಸ್ತೆಯಲ್ಲಿ ಸಸಿ ನೆಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.