ಕಡೂರು: ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿದು, ಜನಜೀವನ ಅಸ್ತವ್ಯಸ್ತಗೊಂಡಿತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ಎರಡು ಗಂಟೆ ಅಬ್ಬರಿಸಿತು. ವಾಹನ ಸವಾರರು ಪರದಾಡಿದರು. ವಾಹನಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಅಂಗಡಿ ಮುಂಗಟ್ಟುಗಳ ಬದಿಯಲ್ಲಿ ನಿಂತು ಮಳೆಯಿಂದ ರಕ್ಷಣೆ ಪಡೆದರು.
ಉತ್ತಮ ಮಳೆಯಿಂದ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಲ್ಲೇಶ್ಚರ ಬಳಿಯ ಆವತಿ ನದಿ, ಮಚ್ಷೇರಿ ಬಳಿಯ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಎಂ.ಕೋಡಿಹಳ್ಳಿ ಮತ್ತು ತಂಗಲಿ ಕೆರೆಗಳು ಭರ್ತುಯಾಗಿ ಕೋಡಿ ಹರಿಯಲಾರಂಭಿಸಿವೆ.
ಸಂತೆ ದಿನವಾದ ಸೋಮವಾರ ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ಸಂತೆಗೆ ಬಂದವರು ಮಳೆಯಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ಟೊಮೊಟೊ ಮತ್ತಿತರ ತರಕಾರಿಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ವ್ಯಾಪಾರಿಗಳು ಪರದಾಡಿದರು.
ಪಟ್ಟಣದ ಮೆಸ್ಕಾಂ ಕಚೇರಿ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿತ್ತು. ಮರವಂಜಿ ರಸ್ತೆ ಜಲಾವೃತಗೊಂಡು ಚರಂಡಿ- ರಸ್ತೆಗೆ ವ್ಯತ್ಯಾಸವೇ ಕಾಣದಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.