ADVERTISEMENT

ತುಳುವಿನಕೊಪ್ಪ: ತ್ರಿಶೂಲಮುದ್ರೆ ಗಡಿಕಲ್ಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:07 IST
Last Updated 28 ಜುಲೈ 2025, 7:07 IST
ಪತ್ತೆಯಾದ ತ್ರಿಶೂಲಮುದ್ರ ಗಡಿಕಲ್ಲು
ಪತ್ತೆಯಾದ ತ್ರಿಶೂಲಮುದ್ರ ಗಡಿಕಲ್ಲು   

ಜಯಪುರ (ಬಾಳೆಹೊನ್ನೂರು): ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಪ್ರದೇಶದ ಕೆರೆಮನೆಯಲ್ಲಿ ಎರಡು ಅಪರೂಪದ ಸ್ಮಾರಕಶಿಲ್ಪಗಳು ಶಾಂತ ಶ್ರೀನಿವಾಸ ಗೌಡ ಮತ್ತು ಕೆರೆಮನೆ ಸುರೇಶ ಅವರ ಜಮೀನಿನಲ್ಲಿ ಪತ್ತೆಯಾಗಿವೆ.

ಶಾಂತ ಶ್ರೀನಿವಾಸ ಗೌಡ ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಸ್ಮಾರಕಶಿಲ್ಪವನ್ನು ಹೊರತೆಗೆದು ಅದರ ಮಾಹಿತಿಯನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರಿಗೆ ತಿಳಿಸಿದ್ದರು. ‌

ಈ ಸಂದರ್ಭದಲ್ಲಿ ಕ್ಷೇತ್ರಕಾರ್ಯ ಶೋಧನೆಗೆ ತೆರಳಿದ ಸಂಶೋಧನಾರ್ಥಿಗೆ ಕೆರೆಮನೆ ಸುರೇಶ ಅವರ ಜಮೀನಲ್ಲೂ ಗಿಡ-ಗಂಟಿಗಳಿಂದ ಮುಚ್ಚಿ ಹೋಗಿದ್ದ ಇನ್ನೊಂದು ಸ್ಮಾರಕಶಿಲ್ಪ ಪತ್ತೆಯಾಗಿದೆ. ಅವುಗಳನ್ನು ಸ್ವಚ್ಛಗೊಳಿಸಿ, ಅಧ್ಯಯನಕ್ಕೆ ಒಳಪಡಿಸಿದಾಗ ಅವುಗಳು ಸಾಮ್ಯತೆಯನ್ನು ಹೊಂದಿರುವುದು ಗೊತ್ತಾಗಿದೆ. ಈ ಸ್ಮಾರಕಶಿಲ್ಪಗಳು ಸುಮಾರು ಎರಡು ಅಡಿ ಎತ್ತರ ಹಾಗೂ ಒಂದು ಅಡಿ ಅಗಲವಾಗಿದ್ದು, ಇವುಗಳು ಒಂದಕ್ಕೊಂದು ಸುಮಾರು 300 ಮೀಟರ್ ಅಂತರದಲ್ಲಿವೆ. ಮುಖ್ಯವಾಗಿ ಈ ಸ್ಮಾರಕಶಿಲ್ಪದ ಮಧ್ಯಭಾಗದಲ್ಲಿ ತ್ರಿಶೂಲ ಹಾಗೂ ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದ್ದು, ಬಹುತೇಕ ಕರ್ನಾಟಕದಲ್ಲಿಯೇ ಕಂಡು ಬಂದಿರುವ ಅಪರೂಪದ ತ್ರಿಶೂಲಮುದ್ರೆ ಗಡಿಕಲ್ಲುಗಳಾಗಿವೆ.

ADVERTISEMENT

ಈ ಶಿಲ್ಪ ಲಕ್ಷಣದ ಹೋಲಿಕೆಯನ್ನು ಹೊಂದಿರುವ 15ನೇ ಶತಮಾನದ ದಾನ ಶಾಸನವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬಳ್ಪ ಪ್ರದೇಶದ ದುರ್ಗಾ ದೇವಾಲಯದ ಒಳ ಪ್ರಾಕಾರದಲ್ಲಿ ಕಂಡುಬಂದಿದೆ. ಆದರೆ, ಅದರಲ್ಲಿ ಸೂರ್ಯ ಚಂದ್ರರ ಬದಲು ಶಂಖ– ಚಕ್ರದ ಕೆತ್ತನೆ ಇದೆ.

ಕಲ್ಕರೆ ಪ್ರದೇಶದ ಅರಣ್ಯದಲ್ಲಿ ಕಲ್ಲಿನ ಪ್ರಾಚೀನ ತಳಪಾಯ ಕಂಡು ಬಂದಿದ್ದು, ಅದು ದೇವಿ ಸಂಬಂಧಿಸಿದ ದೇವಾಲಯದ ನೆಲಗಟ್ಟು ಎಂಬುದು ಇಂದಿಗೂ ಸ್ಥಳೀಯರ ನಂಬಿಕೆಯಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಒಳಪಡಿಸಲಾದ ತ್ರಿಶೂಲಮುದ್ರೆ ಗಡಿಕಲ್ಲುಗಳನ್ನು 14-15ನೇ ಶತಮಾನದಲ್ಲಿ ಹಾಕಿರಬಹುದು ಎಂದು ಸಂಶೋಧನಾರ್ಥಿ ಅಭಿಪ್ರಾಯಪಟ್ಟಿದ್ದಾರೆ.

‌ಕ್ಷೇತ್ರಕಾರ್ಯದಲ್ಲಿ ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ಉಧ್ಯೋಗಿ ಮಹೇಶ್, ಕಲ್ಕೆರೆ ಸುಂದರರಾಜ್, ರಾಘವೇಂದ್ರ ಹಾಗೂ ಕಲ್ಕೆರೆ ಶಾಲೆಯ ವಿದ್ಯಾರ್ಥಿಗಳಾದ ಸನ್ನಿಧಿ, ವಿಕೃತ್ ಸಹಕಾರ ನೀಡಿದ್ದಾರೆ ಎಂದು ನ.ಸುರೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.