ADVERTISEMENT

ಲಸಿಕೆ ಕೊರತೆ: ಜನರಲ್ಲಿ ತಳಮಳ

ಆಸ್ಪತ್ರೆಗೆ ಬಂದು ವಾಪಸಾಗುತ್ತಿರುವ ಫಲಾನುಭವಿಗಳು

ರವಿ ಕೆಳಂಗಡಿ
Published 28 ಏಪ್ರಿಲ್ 2021, 6:03 IST
Last Updated 28 ಏಪ್ರಿಲ್ 2021, 6:03 IST
ಕಳಸದ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಪಡಿತರ ಪಡೆಯಲು ಗ್ರಾಮಸ್ಥರು ದೈಹಿಕ ಅಂತರ ಇಲ್ಲದೆ ಗುಂಪಾಗಿ ನಿಂತಿದ್ದರು.
ಕಳಸದ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಪಡಿತರ ಪಡೆಯಲು ಗ್ರಾಮಸ್ಥರು ದೈಹಿಕ ಅಂತರ ಇಲ್ಲದೆ ಗುಂಪಾಗಿ ನಿಂತಿದ್ದರು.   

ಕಳಸ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ನಾಲ್ಕು ದಿನಗಳಿಂದ ಕೋವಿಡ್ 19 ತಡೆ ಲಸಿಕೆ ಸಿಗದೆ ಜನರಲ್ಲಿ ತಳಮಳ ಉಂಟಾಗಿದೆ.

ಎರಡು ವಾರಗಳಿಂದ ರಾಜ್ಯದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೋವಿಡ್ ತಡೆಯುವ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದರೆ, ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪೂರೈಕೆ ಇಲ್ಲದೆ ಜನರು ಬೇಸರದಿಂದ ವಾಪಾಸಾಗುತ್ತಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಲಸಿಕೆ ಕೇಳಿಕೊಂಡು ಆಸ್ಪತ್ರೆಗೆ ಕನಿಷ್ಠ 500 ಗ್ರಾಮಸ್ಥರು ಹೋಗಿದ್ದರು. ಲಸಿಕೆ ಇಲ್ಲದ ಕಾರಣ ಎಲ್ಲರೂ ನಿರಾಸೆಯಿಂದ ವಾಪಸಾದರು. ಕೆಲವರು ಆಸ್ಪತ್ರೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರೆ, ಉಳಿದವರು ಸರ್ಕಾರ ಮತ್ತು ಆರೋಗ್ಯ ಇಲಾಖೆಯನ್ನು ದೂರಿದರು.

ADVERTISEMENT

ಕಳೆದ ವಾರ ಕಳಸ ತಾಲ್ಲೂಕಿನಲ್ಲಿ ಕೇವಲ 10 ಕೋವಿಡ್ ಸೋಂಕಿತರು ಇದ್ದರು. ಒಂದೇ ವಾರದಲ್ಲಿ ಆ ಸಂಖ್ಯೆ ಐದು ಪಟ್ಟು ಹೆಚ್ಚಿದ್ದು 50ಕ್ಕೂ ಹೆಚ್ಚು ಸೋಂಕಿತರು ಇದ್ದಾರೆ. ರೋಗ ಲಕ್ಷಣ ಇರುವ ಅನೇಕರು ತಾಲ್ಲೂಕಿನಾದ್ಯಂತ ಇದ್ದಾರೆ. ಆದರೆ ಹೆಚ್ಚಿನವರು ರೋಗ ತಪಾಸಣೆಗೆ ಬರುತ್ತಿಲ್ಲ. ಇದರಿಂದಾಗಿ ಸೋಂಕು ಇನ್ನಷ್ಟು ಹೆಚ್ಚುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಕಳೆದ ವಾರದವರೆಗೂ ಕೋವಿಡ್ ಲಸಿಕೆ ಎಂದರೆ ಜನರು ಮೂಗುಮುರಿಯುತ್ತಿದ್ದರು. ಆದರೆ, ಈಗ ಸೋಂಕು ಹೆಚ್ಚಿರುವ ಕಾರಣಕ್ಕೆ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಲಸಿಕೆ ಅಲಭ್ಯತೆ ಬಗ್ಗೆ ‘ಪ್ರಜಾವಾಣಿ’ ತಾಲ್ಲೂಕು ಕೋವಿಡ್ ವೈದ್ಯಾಧಿಕಾರಿ ಮಧುಸೂದನ್ ಅವರನ್ನು ಪ್ರಶ್ನಿಸಿದಾಗ ಅವರು, ‘ಮೂಡಿಗೆರೆ ತಾಲ್ಲೂಕಿನ 16 ಆಸ್ಪತ್ರೆಗಳಿಗೆ ದಿನಕ್ಕೆ 500ರಿಂದ 1000 ಡೋಸ್ ಸಿಗುತ್ತಿದೆ. ಇದನ್ನು ಸಮನಾಗಿ ಹಂಚಿ ಎಲ್ಲ ಆಸ್ಪತ್ರೆಗೂ ನೀಡಬೇಕಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆ ಕಡಿಮೆ ಆಗಿದೆ. ಕಳಸಕ್ಕೆ 100 ಲಸಿಕೆ ನೀಡಿದ್ದು, ಬುಧವಾರ ಮೊದಲು ಬಂದವರಿಗೆ, ಆದ್ಯತೆ ಮೇಲೆ ನೀಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.