ಮೂಡಿಗೆರೆ: ತಾಲ್ಲೂಕಿನ ಬಣಕಲ್ ಹೋಬಳಿಯ ಮತ್ತಿಕಟ್ಟೆ ಗ್ರಾಮದಲ್ಲಿ ಎರಡು ಕಾಡುಕೋಣಗಳು ರಸ್ತೆ ಬದಿಯಲ್ಲಿ ಕೆಲಕಾಲ ಮೇಯುತ್ತ ದಾರಿಹೋಕರಲ್ಲಿ ಆತಂಕ ಸೃಷ್ಟಿಸಿದವು.
ಸಂಜೆ ಬಿ. ಹೊಸಳ್ಳಿ ಅರಣ್ಯ ಪ್ರದೇಶದಿಂದ ರಸ್ತೆಗಿಳಿದ ಎರಡು ಕಾಡುಕೋಣಗಳು 15 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ಬದಿಯಲ್ಲಿ ನಿಂತು ಮೇಯಲು ಪ್ರಾರಂಭಿಸಿದವು. ವಾಹನಗಳು ಬಂದರೂ ರಸ್ತೆ ಬದಿ ಬಿಟ್ಟು ಕದಲದ ಕಾಡು ಕೋಣಗಳು, ಮಳೆ ಪ್ರಾರಂಭವಾಗುತ್ತಿದ್ದಂತೆ ಕಾಫಿ ತೋಟದ ಮೂಲಕ ಅರಣ್ಯ ಪ್ರದೇಶ ಸೇರಿದವು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ಗ್ರಾಮಸ್ಥರೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು. ಪುನಃ ಅದೇ ಪ್ರದೇಶದಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿರುವುದರಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಡುಕೋಣಗಳ ಹಾವಳಿಯಿಂದಾಗಿ ಕಾಫಿ ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ಕಾಡುಕೋಣಗಳ ಉಪಟಳ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.