ಶೃಂಗೇರಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪುಂಡಾನೆ ಸಂಚರಿಸುತ್ತಿದ್ದು, ಗುರುವಾರ ಕೊಪ್ಪ ತಾಲ್ಲೂಕಿನ ಎನ್‍ಎಚ್‍ಬಿ, ಅಸಗೋಡು ರೈತರ ತೋಟದಲ್ಲಿ, ಹೋನಗೋಡು ಮತ್ತು ಶುಕ್ರವಾರ ಅಡ್ಡಗದ್ದೆ, ಅಣ್ಣುಕೊಡಿಗೆ ಸಮೀಪ ಕಾಣಿಸಿಕೊಂಡಿದೆ. ಪುಂಡಾನೆಯು ಶನಿವಾರ ಚಿತ್ರವಳ್ಳಿಯ ಕಾಡಿನಲ್ಲಿದ್ದು ಆ ಭಾಗದ ಗ್ರಾಮಸ್ಥರಿಗೆ ಆತಂಕ ಹೆಚ್ಚಿದೆ.
ಪುಂಡಾನೆಯು ಗುರುವಾರ ಸಂಜೆಯಿಂದ ಎನ್‍ಎಚ್‍ಬಿ ಸಮೀಪದ ಬಳಿ ಸಂಚರಿಸಿದ್ದು, ಅಸಗೋಡು ರೈತರ ತೋಟದ ಬೇಲಿಯನ್ನು ಧ್ವಂಸ ಮಾಡಿದೆ. ಆ ಭಾಗದಲ್ಲಿ ನಾಟಿ ಮಾಡಿದ ಗದ್ದೆಯನ್ನು ತುಳಿದಿದೆ. ಅಡ್ಡಗದ್ದೆ, ಹೋನಗೋಡು ಸಂಚರಿಸಿದ್ದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಚಿತ್ರವಳ್ಳಿ ಸಮೀಪದ ಕಾಡಿನಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯವರು ಮುಂಜಾಗೃತ ಕ್ರಮವಾಗಿ ಮೈಕ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
‘ಶನಿವಾರ ಬೆಳಿಗ್ಗೆಯಿಂದ ಅಡ್ಡಗದ್ದೆಯ ಅಣ್ಣುಕೊಡಿಗೆ, ಚಿತ್ರವಳ್ಳಿಯಲ್ಲಿ ಪುಂಡಾನೆ ಕಾಣಿಸಿಗೊಂಡಿದ್ದರಿಂದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಆ ಭಾಗದಲ್ಲಿ ತೋಟ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನೆಗೆ ಕಳಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯ ಪಡೆ ಆನೆ ಸಂಚಾರದ ಚಲನವಲದ ಬಗ್ಗೆ ಗಮನ ಹರಿಸಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹದ ಸಂದೇಶಗಳಿಂದ ಆತಂಕಕ್ಕೆ ಒಳಗಾಗಬಾರದು. ಭಾನುವಾರ ಕೂಡ ಕಾರ್ಮಿಕರು ಮತ್ತು ಸಾರ್ವಜನಿಕರು ಹೊರಗೆ ಬಾರದಂತೆ ಮನವಿ ಮಾಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಮಧುಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.