ADVERTISEMENT

ಕಾಫಿನಾಡಿನ ‘ಕುಸ್ತಿ’ ಮಿಂಚುಳ್ಳಿಯರು ಈ ಅವಳಿ ಸಹೋದರಿಯರು

ಬಿ.ಜೆ.ಧನ್ಯಪ್ರಸಾದ್
Published 8 ಮಾರ್ಚ್ 2021, 4:56 IST
Last Updated 8 ಮಾರ್ಚ್ 2021, 4:56 IST
ಆತ್ಮಶ್ರೀ, ಅನುಶ್ರೀ
ಆತ್ಮಶ್ರೀ, ಅನುಶ್ರೀ   

ಚಿಕ್ಕಮಗಳೂರು: ಕುಸ್ತಿಯಲ್ಲಿ ಸಾಧನೆ ಮೆರೆದಿರುವ ಎಚ್‌.ಎಸ್‌.ಅನುಶ್ರೀ– ಎಚ್‌.ಎಸ್‌.ಆತ್ಮಶ್ರೀ ಅವಳಿ ಸಹೋದರಿಯರು ಕಾಫಿನಾಡಿನ ಹೆಮ್ಮೆಯ ಕುವರಿಯರು .

ಕೊಪ್ಪ ತಾಲ್ಲೂಕಿನ ಹೊಸಳ್ಳಿಯ ಕೃಷಿಕ ಎಚ್‌.ಆರ್‌.ಶ್ರೀನಿವಾಸ ಮತ್ತು ಸುಲೋಚನಾ ದಂಪತಿಯ ಪುತ್ರಿಯರಿವರು. ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಮಿಂಚಿ ಕೀರ್ತಿ ಪತಾಕೆ ಹಾರಿಸಿರುವ ದಿಟ್ಟೆಯರು. ಕಬಡ್ಡಿ, ಅಥ್ಲಿಟಿಕ್ಸ್‌ನಲ್ಲೂ ಛಾಪು ಮೂಡಿಸಿದ್ದಾರೆ. ಇಬ್ಬರೂ ಎಂ.ಕಾಂ ಪದವಿ ಮುಗಿಸಿದ್ದಾರೆ. ಕ್ರೀಡೆ, ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಈ ಗ್ರಾಮೀಣ ಪ್ರತಿಭೆಗಳು ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

ಬೆಳವಿನಕೊಡಿಗೆಯಲ್ಲಿ ಪ್ರಾಥಮಿಕ ಶಾಲಾ(ಕನ್ನಡ ಮಾಧ್ಯಮ), ನಾರ್ವೆಯಲ್ಲಿ ಪ್ರೌಢಶಾಲಾ (ಕನ್ನಡ ಮಾಧ್ಯಮ), ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್‌ ವಿದ್ಯಾಲಯದಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದಾರೆ.

ADVERTISEMENT

ಪ್ರೌಢಶಾಲೆವರೆಗೆ ಕಬಡ್ಡಿ, ಅಥ್ಲಿಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಪಿಯುಸಿಯಲ್ಲಿ (2011ರಲ್ಲಿ) ಕುಸ್ತಿ ಪ್ರೀತಿ ಮೊಳೆತು ಈಗ ಹೆಮ್ಮರವಾಗಿದೆ. ಇವರಿಬ್ಬರ ಕಬಡ್ಡಿ ಪ್ರಾವೀಣ್ಯ ಗಮನಿಸಿದ ಕುಸ್ತಿ ಕೋಚ್‌ ತುಕಾರಾಂ ಗೌಡ ಅವರು ಕುಸ್ತಿ ಕಡೆಗೆ ಸೆಳೆದಿದ್ದಾರೆ.

ಪುರಸ್ಕಾರಗಳು: ಇಬ್ಬರಿಗೂ ‘ಕರ್ನಾಟಕ ಕ್ರೀಡಾ ರತ್ನ’ ಗರಿ, ‘ಮೈಸೂರು ದಸರಾ’, ‘ಚೆನ್ನಮ್ಮ ಕೇಸರಿ’ ಪ್ರಶಸ್ತಿ ಸಹಿತ ಹಲವಾರು ರಾಜ್ಯ, ರಾಷ್ಟ್ರಮಟ್ಟದ ಪುರಸ್ಕಾರಗಳು ಸಂದಿವೆ.

‘ಕುಸ್ತಿ ಬಗ್ಗೆ ಮೊದಲು ಗೊತ್ತಿರಲಿಲ್ಲ. ನಮ್ಮೂರಿನಲ್ಲಿ ಗಂಡು ಮಕ್ಕಳೇ ಈ ಆಟ ಆಡುತ್ತಿರಲಿಲ್ಲ. ಕುಸ್ತಿ ಕಡೆಗೆ ಒಲವು ಬೆಳೆಯಲು ಕೋಚ್‌ ತುಕಾರಾಂ ಅವರೇ ಕಾರಣ. ಅವರ ಗರಡಿಯಲ್ಲಿ ಪಟ್ಟುಗಳನ್ನು ಕಲಿತೆವು. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮ್ಮಾನ ಗಳಿಸಿದೆವು’ ಎಂದು ಅನುಶ್ರೀ ತಿಳಿಸಿದರು.

‘ಆರಂಭಿಕ ಹಂತದಲ್ಲಿ ಕುಸ್ತಿ ಕಲಿಕೆ ಸ್ವಲ್ಪ ಕಷ್ಟವಾಯಿತು. ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ’ ಎಂದು ಮುನ್ನುಗಿ ಯಶಸ್ವಿಯಾದೆವು. ಇಬ್ಬರೂ ಓದಿನಲ್ಲೂ ಚೂಟಿ ಇದ್ದೆವು. ಅಕ್ಕ (ಆತ್ಮಶ್ರೀ) ಬಿ.ಕಾಂನಲ್ಲಿ ತರಗತಿಗೆ ‘ಟಾಪರ್’. ಕ್ರೀಡೆಯಲ್ಲೂ ‘ಟಾಪರ್‌’ ಇದ್ದರು’ ಎಂದು ಅವರ ಕುಸ್ತಿ ಪಯಣ ವಿವರಿಸಿದರು.

‘ಕ್ರೀಡೆಗಳಲ್ಲಿ ಭಾಗವಹಿಸಲು ಪೋಷಕರು ಸದಾ ಪ್ರೋತ್ಸಾಹ ನೀಡುತ್ತಿದ್ದರು. ಸ್ಪರ್ಧೆಗಳಿಗೆ ನಮ್ಮಿಬ್ಬರನ್ನು ಅಪ್ಪ ಕರೆದೊಯ್ಯುತ್ತಿದ್ದರು. ಅಣ್ಣನೂ ಕಬಡ್ಡಿ ಆಟಗಾರ. ಅಮ್ಮನಿಗೆ (ಸುಲೋಚನಾ) ‘ಶಾಟ್‌ಪುಟ್‌’, ‘ಡಿಸ್ಕಸ್‌ ಥ್ರೊ’ ಆಡಿದ ಅನುಭವ ಇದೆ. ಮಕ್ಕಳಲ್ಲಿ ಕ್ರೀಡಾಸಕ್ತಿ ಮೈಗೂಡಲು ಅದೂ ಕಾರಣ ಇರಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆಯಬೇಕು ಎಂಬ ತುಡಿತ ಇದೆ’ ಎಂದು ಮನದಾಳ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.