ADVERTISEMENT

ಚಿಕ್ಕಮಗಳೂರು| ದೇಶದ ಅಭಿವೃದ್ಧಿಗೆ ಯುವಶಕ್ತಿ ಕಾರಣ: ಜಾರ್ಜ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:02 IST
Last Updated 13 ಜನವರಿ 2026, 6:02 IST
ವಿವೇಕಾನಂದರ ಭಾವಚಿತ್ರಕ್ಕೆ ಸಚಿವ ಕೆ.ಜೆ.ಜಾರ್ಜ್ ಪುಷ್ಪ ನಮನ ಸಲ್ಲಿಸಿದರು
ವಿವೇಕಾನಂದರ ಭಾವಚಿತ್ರಕ್ಕೆ ಸಚಿವ ಕೆ.ಜೆ.ಜಾರ್ಜ್ ಪುಷ್ಪ ನಮನ ಸಲ್ಲಿಸಿದರು   

ಚಿಕ್ಕಮಗಳೂರು: ಯುವಕರೇ ದೇಶದ ಆಸ್ತಿ. ಇಂದು ರಾಷ್ಟ್ರ ಜಾಗತಿಕವಾಗಿ ಮುಂದುವರೆಯಲು ಯುವ ಶಕ್ತಿಯೇ ಕಾರಣ. ಸ್ಪರ್ಧಾತ್ಮಕ ಜಗತ್ತಿನಲ್ಲಿ ದೇಶದ ವಿದ್ಯಾರ್ಥಿಗಳು, ವಿಜ್ಞಾನಿಗಳು, ತಂತ್ರಜ್ಞರು ಪ್ರಪಂಚದಾದ್ಯಂತ ಮುಂಚೂಣಿಯಲ್ಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ವಿವೇಕ-ಕುವೆಂಪು-ಪೂರ್ಣಚಂದ್ರ ತೇಜಸ್ವಿ ಪ್ರೇರಣೆ ಮತ್ತು ಪ್ರಭಾವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ದೆಸೆಯಲ್ಲಿ ಹಾಗೂ ರಾಜಕೀಯದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳು ಮಾರ್ಗದರ್ಶನವಾಗಿವೆ. ಏಳಿ ಎದ್ದೇಳಿ– ಗುರಿ ಮುಟ್ಟುವ ತನಕ ನಿಲ್ಲದಿರಿ ಸ್ವಾಭಿಮಾನ ಮೈಗೂಡಿಸಿಕೊಳ್ಳಿ, ರಾಷ್ಟ್ರಸೇವೆ ಮಾಡಿ ಎಂದು ವಿವೇಕಾನಂದರು ಕರೆ ನೀಡಿದ್ದಾರೆ. 1893ಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಇಡೀ ಜಗತ್ತು ಭಾರತದ ಕಡೆ ನೋಡುವಂತೆ ಮಾಡಿತು’ ಎಂದರು.

ADVERTISEMENT

ರಾಮಕೃಷ್ಣ ಮಿಷನ್ ಹೆಸರಿನಲ್ಲಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಆಶ್ರಮಗಳು, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ದೇಶದಾದ್ಯಂತ ನಡೆಯುತ್ತಿವೆ. ಚಿಕ್ಕಂದಿನಲ್ಲಿ ಮೈಸೂರಿನ ರಾಮಕೃಷ್ಣ ಮಿಷನ್ ಶಾಲೆಯಲ್ಲಿ ಓದಿದ ಮಕ್ಕಳು ಊರಿಗೆ ಬಂದಾಗ ನಡೆದುಕೊಳ್ಳುವ ರೀತಿ ನೋಡಿ ನಮಗೆ ಪ್ರೇರಣೆ ಸಿಗುತಿತ್ತು ಎಂದು ಹೇಳಿದರು.

ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಉಳಿವಿಗೆ ದೇಶದಲ್ಲಿ ಹಲವು ಮಹನೀಯರು ಶ್ರಮಿಸಿದ್ದಾರೆ. ಇದರಲ್ಲಿ ವಿವೇಕಾನಂದರದು ಪ್ರಮುಖ ಕೊಡುಗೆಯಿದೆ. ಸಹಿಷ್ಣುತೆಗೆ ಹಿಂದೂ ಧರ್ಮ ಹೆಸರುವಾಸಿಯಾಗಿದೆ. ಜಾತ್ಯತೀತ ಮನೋಭಾವದಿಂದ‌ ಭಾರತೀಯರು ಒಟ್ಟಾಗಿ ಬಾಳಬೇಕು ಎಂದು ತಿಳಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವ ಜನ ಬದಲಾದರೆ ದೇಶ ಬದಲಾಗಲಿದೆ. ಪ್ರತಿ ಯುವಕ-ಯುವತಿಯರು ತಮ್ಮ ಜೀವನವನ್ನು ಸಮಾಜದ ಹಿತಕ್ಕಾಗಿ ಸಮರ್ಪಿಸಿಕೊಂಡಾಗ ಮಾತ್ರ ಯುವ ಜನೋತ್ಸವಕ್ಕೆ ಮಹತ್ವ ಹಾಗೂ ಅರ್ಥ ದೊರೆಯಲಿದೆ’ ಎಂದು ಹೇಳಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ನಿವೃತ್ತ ತರಬೇತಿ ನಿರ್ದೇಶಕ ಜಿ.ಎಂ.ಸರ್ವೇಶ್ವರ್ ಮಾತನಾಡಿ, ‘ಸ್ವಾಮಿ ವಿವೇಕಾನಂದ-ಯುವ ಕಣ್ಮಣಿ’ ಕುರಿತು, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಅವರು ‘ಶ್ರೀ ಕುವೆಂಪು-ಯುವ ಸಂದೇಶ’ ಕುರಿತು ಹಾಗೂ ಚಿಕ್ಕಮಗಳೂರಿನ ಯುವ ತರಬೇತುದಾರ ಎಚ್.ಎಸ್.ಶಿವಕುಮಾರ್ ಅವರು ‘ಶ್ರೀ ಪೂರ್ಣಚಂದ್ರ ತೇಜಸ್ವಿ-ಯುವ ಮಾರ್ಗದರ್ಶಕರು’ ಕುರಿತು ಉಪನ್ಯಾಸ ನೀಡಿದರು.

ಶಾಸಕ ಟಿ.ಡಿ.ರಾಜೇಗೌಡ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಎಚ್.ಪಿ.ಮಂಜುಳಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.