ADVERTISEMENT

ಅಂತರ್ಜಲ ಕುಸಿತ; ಬಾಡಿದ ರೈತನ ಬದುಕು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:43 IST
Last Updated 24 ಏಪ್ರಿಲ್ 2013, 10:43 IST

ಮೊಳಕಾಲ್ಮುರು: ತಾಲ್ಲೂಕಿಗೆ ಬರಸ್ಥಿತಿ ಹೊಸದೇನಲ್ಲ, ಆದರೆ, ಈ ವರ್ಷದಂತಹ ಬರಗಾಲ ಕಂಡಿರಲಿಲ್ಲ ಎಂಬುದು ಈ ಭಾಗದ ಹಿರಿಯ ರೈತರ ಅನಿಸಿಕೆ.
ಕಳೆದ ವರ್ಷ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ 'ಲೈಲಾ' ಚಂಡಮಾರುತ ಪರಿಣಾಮ ಬಿದ್ದ ಮಳೆ ಬಿಟ್ಟರೆ ಮತ್ತೆ ಈವರೆಗೆ ದೊಡ್ಡ ಪ್ರಮಾಣದ ಮಳೆ ಇನ್ನೂ ಬಂದಿಲ್ಲ. ಪರಿಣಾಮ ಯಾವುದೇ ಕೆರೆ, ಚೆಕ್‌ಡ್ಯಾಂನಲ್ಲಿ ನೀರಿಲ್ಲದ ಕಾರಣ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿ ಸಾವಿರಾರು ಕೊಳವೆ ಬಾವಿಗಳು ಬತ್ತಿ ಹೋಗುವ ಮೂಲಕ ಆತಂಕ ಸ್ಥಿತಿ ಎದುರಾಗಿದೆ.

ತಾಲ್ಲೂಕಿನಲ್ಲಿ 2,762 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಈ ಪೈಕಿ 1,500 ಹೆಕ್ಟೇರ್‌ನಲ್ಲಿ ದಾಳಿಂಬೆ ಇದೆ. ನಂತರ ಬಾಳೆ, ತೆಂಗು ಹಾಕಲಾಗಿದೆ. ನೀರಿಲ್ಲದ ಕಾರಣ ಶೇ 35ರಷ್ಟು ತೋಟಗಳು ಒಣಗಿ ಹೋಗಿವೆ. ಈ ಬಾರಿ ದಾಳಿಂಬೆ ಇಳುವರಿ ಶೇ 50ಕ್ಕೂ ಹೆಚ್ಚು ಕುಂಠಿತವಾಗುವ ಅಂದಾಜಿದೆ. ಇದಕ್ಕಾಗಿ ಕಡ್ಡಾಯ ಹನಿ ನೀರಾವರಿ ಮತ್ತು ಮಲ್ಚಿಂಗ್ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಹೇಳುತ್ತಾರೆ.

ರೇಷ್ಮೆ ಇಲಾಖೆ ಅಧಿಕಾರಿ ಹನುಮಂತಪ್ಪ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ 750ರಿಂದ 800 ಎಕರೆಯಲ್ಲಿ ರೇಷ್ಮೆ ಬೆಳೆಲಾಗುತ್ತಿದ್ದು, ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿತ್ತು. ಅಂತರ್ಜಲ ಬತ್ತಿರುವ ಹಿನ್ನೆಲೆಯಲ್ಲಿ ಶೇ 30ಕ್ಕೂ ಹೆಚ್ಚು ತೋಟಗಳಲ್ಲಿ ರೇಷ್ಮೆ ಗಿಡಗಳು ಒಣಗುತ್ತಿರುವ ಕಾರಣ ಹುಳು ಚಾಕಣೆ ಸ್ಥಗಿತ ಮಾಡಲಾಗಿದೆ. ತಾಲ್ಲೂಕಿನಲ್ಲಿ ಮಾಸಿಕ 20 ಟನ್ ಗೂಡು ಉತ್ಪಾದನೆಯಾಗುತಿತ್ತು. ಬರಗಾಲದ ಕಾರಣದಿಂದ ರೈತರ ಆದಾಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ತಾಲ್ಲೂಕಿನಲ್ಲಿ ಎರಡು ಸಾವಿರ ಹೆಕ್ಟೇರ್‌ನಲ್ಲಿ ನೀರಾವರಿ ಬೆಳೆ ಹಾಕಲಾಗುತ್ತಿದೆ. ಕಳೆದ ತಿಂಗಳು ರಾಂಪುರ ಹೋಬಳಿಯಲ್ಲಿ 200 ಎಕರೆಯಲ್ಲಿ ಹತ್ತಿ ನಾಟಿ ಮಾಡಲಾಗಿದ್ದು, ಮಳೆ ವಿಳಂಬವಾಗಿ ರೈತರು ನಿತ್ಯ ಮುಗಿಲು ನೋಡುವಂತಾಗಿದೆ. ಮಳೆ ವಿಳಂಬವಾದಲ್ಲಿ ಬೆಳೆ ಕೈಕೊಡಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಮದ್ ಒಬೇದುಲ್ಲಾ ಹೇಳಿದರು.

ಮೂಲಗಳ ಪ್ರಕಾರ ತಾಲ್ಲೂಕಿನ ಶೇ  75ಕ್ಕೂ ಹೆಚ್ಚು ರೈತರು ಹೊಸ ಕೊಳವೆಬಾವಿ ಕೊರೆಸಿದ್ದಾರೆ. 30-40 ರಷ್ಟು ರೈತರು ತೋಟಗಳಲ್ಲಿ ಬೇಸಗೆ ಮುಂಗಾರು ಹಂಗಾಮಿನ ಬೆಳೆ ಇಡಲು ಹಿಂದೇಟು ಹಾಕಿದ್ದಾರೆ. ಸಣ್ಣ ರೈತರು ಕೃಷಿ ಸಹವಾಸವೇ ಸಾಕು ಎಂಬ ಸ್ಥಿತಿ ಮುಟ್ಟಿದ್ದು, ಮಳೆ ವಿಳಂಬವಾದಲ್ಲಿ ಪರಿಸ್ಥಿತಿ ಹೇಳತೀರದು ಎಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.