ADVERTISEMENT

ಚಂದ್ರಪ್ಪ ಅವರ ಗೆಲುವಿಗೆ ಶ್ರಮ

ಟಿಕೆಟ್ ಆಕಾಂಕ್ಷಿ ಡಿ.ಬಸವರಾಜು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 5:53 IST
Last Updated 19 ಮಾರ್ಚ್ 2014, 5:53 IST

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಿರತವಾಗಿ ಶ್ರಮಿಸಿದೆ. ಆದರೆ ಅದೃಷ್ಟ ನನಗೆ ಕೈಕೊಟ್ಟು, ಹಿರಿಯ ನಾಯಕ ಬಿ.ಎನ್.ಚಂದ್ರಪ್ಪ ಅವರ ಕೈ ಹಿಡಿಯಿತು. ಸದ್ಯ ಚಂದ್ರಪ್ಪ ಅವರನ್ನು ಬೆಂಬಲಿಸಿ, ಗೆಲ್ಲಿಸಿ, ಅವರ ಗೆಲುವಿನಲ್ಲಿ ನನ್ನ ಗೆಲುವನ್ನು ಕಾಣುತ್ತೇನೆ...!

ದಾವಣಗೆರೆಯ ಮಾಜಿ ನಗರಸಭಾ ಅಧ್ಯಕ್ಷ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿ ಡಿ.ಬಸವರಾಜು ಅವರ ಮಾತುಗಳು ಇವು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ‘ಟಿಕೆಟ್ ಕೈತಪ್ಪಿದೆ. ಆದರೆ ಹೈಕಮಾಂಡ್ ಆಯ್ಕೆ ಮಾಡಿರುವ ಅಭ್ಯರ್ಥಿಪರ ಕೆಲಸ ಮಾಡುತ್ತೇವೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ನಾನು ಮತ್ತು ಚಂದ್ರಪ್ಪ ‘ನಿಮಗೆ ಟಿಕೆಟ್ ಸಿಕ್ಕಿದರೆ ನಾನು ನಿಮ್ಮಪರ ಪ್ರಚಾರಕ್ಕೆ ಬರುತ್ತೇನೆ. ನನಗೆ ಸಿಕ್ಕಿದರೆ ನೀವು ಬರಬೇಕು’ ಎಂದು ಪರಸ್ಪರ ಮಾತನಾಡಿದ್ದೆವು. ಅದರಂತೆ ಚಂದ್ರಪ್ಪ ಅವರ ಪರ ಪ್ರಚಾರ ಮಾಡುತ್ತಿದ್ದೇನೆ’ ಎಂದರು.

‘ಕಾಂಗ್ರೆಸ್ ಪಕ್ಷಕ್ಕೆ 129 ವರ್ಷಗಳ ಇತಿಹಾಸವಿದೆ. ಆ ಪಕ್ಷ ಯಾರನ್ನೂ ಕೈಬಿಟ್ಟಿಲ್ಲ. ಮುಂದಿನ ವರ್ಷ 12 ರಿಂದ 13 ವಿಧಾನ ಪರಿಷತ್ತಿನ ಸದಸ್ಯ ಸ್ಥಾನ, ಎರಡು ರಾಜ್ಯ ಸಭಾ ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ. ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳಿವೆ. ಎಲ್ಲಾದರೂ ಒಂದು ಕಡೆ ಅವಕಾಶ ಸಿಕ್ಕೇ ಸಿಗುತ್ತದೆ. ನಾನು ಆಶಾವಾದಿಯಾಗಿದ್ದೇನೆ. ಇದೇ ಆಶಾವಾದದಿಂದ ಮೂರು ದಶಕಗಳನ್ನು ಕಾಂಗ್ರೆಸ್‌ನ ವಿವಿಧ ಹಂತದಲ್ಲಿ ಕಳೆದಿದ್ದೇನೆ’ ಎಂದು ನುಡಿದರು.

‘ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಅಲೆ ಕರ್ನಾಟಕದಲ್ಲಿ ಇಲ್ಲ. ಯುಪಿಎ ಸರ್ಕಾರದ ಸಾಧನೆ ಮುಂದೆ ಮೋದಿ ಫ್ಯಾಕ್ಟರ್ ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದವರು ಕೇವಲ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದರು.

‘ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿ ಗಳಾಗಿದ್ದವರೆಲ್ಲಾ  ಬಿ.ಎನ್.ಚಂದ್ರಪ್ಪ ಅವರ ಪರ ಪ್ರಚಾರಕ್ಕಿಳಿದಿದ್ದಾರೆ. ನಮ್ಮ  ಕ್ಷೇತ್ರದಲ್ಲಿ ಎಚ್‌.ಆಂಜನೇಯ, ಟಿ.ಬಿ.ಜಯಚಂದ್ರ ಇಬ್ಬರು ಪ್ರಮುಖ ಸಚಿವರಿದ್ದಾರೆ. ಐವರು ಶಾಸಕರಿದ್ದಾರೆ. ಇಷ್ಟೆಲ್ಲ ಬಲ ಇಟ್ಟುಕೊಂಡು ಅಭ್ಯರ್ಥಿ ಗೆಲ್ಲಿಸುವುದು ಕಷ್ಟವೇನಲ್ಲ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎಚ್.ತಿಪ್ಪೇಸ್ವಾಮಿ, ಟಿ.ವೀರೇಶ್, ಚಂದ್ರಶೇಖರ್ ಬಾಬು, ವೇಣುಗೋಪಾಲ್, ನವೀನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.