ADVERTISEMENT

‘ಜನಾಶೀರ್ವಾದ ಸಮಾವೇಶ’ಕ್ಕೆ ರಾಹುಲ್ ಗಾಂಧಿ

ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಶಾಲಾ ಆವರಣದಲ್ಲಿ ಬೃಹತ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 8:28 IST
Last Updated 31 ಮಾರ್ಚ್ 2018, 8:28 IST
ಎಐಸಿಸಿ ಕಾರ್ಯದರ್ಶಿ ಮತ್ತು ವಕ್ತಾರ ಮಧುಯಾಸ್ಕಿ ಗೌಡ್
ಎಐಸಿಸಿ ಕಾರ್ಯದರ್ಶಿ ಮತ್ತು ವಕ್ತಾರ ಮಧುಯಾಸ್ಕಿ ಗೌಡ್   

ಚಿತ್ರದುರ್ಗ: ಅಖಿಲ ಭಾರತ ಕಾಂಗ್ರೆಸ್  ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 4ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ ‘ಜನಾಶೀರ್ವಾದ ಸಮಾವೇಶ’ದಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಂಸದ ಬಿ.ಎನ್. ಚಂದ್ರಪ್ಪ ತಿಳಿಸಿದರು.ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಸಮಾವೇಶದ ವಿವರಗಳನ್ನು ಹಂಚಿಕೊಂಡರು.

‘ಮೊದಲ ಹಂತದಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ನಾಲ್ಕು ವಿಭಾಗಗಳಲ್ಲಿ ಪ್ರವಾಸ ಮುಗಿಸಿದ್ದಾರೆ. ಅಲ್ಲೆಲ್ಲಾ ಅಭೂತಪೂರ್ವ ಸ್ವಾಗತ, ಮತದಾರರಿಂದ ಸ್ಪಂದನೆ ಸಿಕ್ಕಿದೆ. ಎರಡನೇ ಹಂತದ ಪ್ರವಾಸವನ್ನು ಏಪ್ರಿಲ್ 3ರಿಂದ ಆರಂಭಿಸಲಿದ್ದಾರೆ. ಅಂದು ಶಿವಮೊಗ್ಗದಲ್ಲಿ ಸಮಾವೇಶ ಮುಗಿಸಿಕೊಂಡು, ದಾವಣಗೆರೆ ಜಿಲ್ಲೆಗೆ ಬರಲಿದ್ದಾರೆ.
ಏ.4ರಂದು ಹೊಳಲ್ಕೆರೆಯ ಕೊಟ್ರೆನಂಜಪ್ಪ ಶಾಲಾ ಆವರಣದಲ್ಲಿ ನಡೆಯುವ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸುತ್ತಾರೆ’ ಎಂದು ವಿವರಣೆ ನೀಡಿದರು.

‘ಏಪ್ರಿಲ್‌ 3ರಂದು ಶಿವಮೊಗ್ಗ, ದಾವಣಗೆರೆ ಮುಗಿಸಿಕೊಂಡು, ಏಪ್ರಿಲ್‌ 4ರಂದು ಚಿತ್ರದುರ್ಗದಲ್ಲಿ ಸಮಾವೇಶದಲ್ಲಿ ಭಾಗಿಯಾಗಿ, ನಂತರ ತುಮಕೂರು ಮತ್ತು ರಾಮ ನಗರದ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಒಂದೇ ದಿನ ಮೂರು ಕಡೆ ಕಾರ್ಯಕ್ರಮಗಳಿರುವುದರಿಂದ ಸಮಯಾವಕಾಶ ತುಂಬಾ ಕಡಿಮೆ ಇದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದರು.‘ಕಾರ್ಯಕ್ರಮ ಪಟ್ಟಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳಾದರೂ 4ರ ಸಮಾವೇಶ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಖಚಿತಪಡಿಸಿದ ಚಂದ್ರಪ್ಪ, ‘ನಂತರದಲ್ಲಿ ಏನಾದರೂ ಬದಲಾವಣೆಗಳಾದರೆ ಮಾಧ್ಯಮಗಳ ಗಮನಕ್ಕೆ ತರುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

40 ಸಾವಿರ ಜನರ ನಿರೀಕ್ಷೆ: ‘ನಾಲ್ಕು ವಿಭಾಗಗಳಲ್ಲಿನ ರಾಹುಲ್ ಗಾಂಧಿ ಅವರ ಭೇಟಿಗೆ ಅದ್ಭುತ ಎನ್ನುವಂಥ ಸ್ಪಂದನೆ ಸಿಕ್ಕಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬಂದಾಗ ಯಾವ ರೀತಿ ಜನ ಬಾಂಧವ್ಯ ಇಟ್ಟುಕೊಂಡಿದ್ದರೋ, ಈಗಲೂ ಅಂಥದ್ದೇ ಪ್ರೀತಿಯನ್ನು ತೋರುತ್ತಿದ್ದಾರೆ. ಇತಿಹಾಸ ಪುನರಾವರ್ತನೆಯಾಗುತ್ತಿದೆ. ಆಗ ಅಜ್ಜಿ ಬರುತ್ತಿದ್ದರು. ಈಗ ಮೊಮ್ಮಗ ಬರುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. ಸಮಾವೇಶಕ್ಕೆ 40 ಸಾವಿರಕ್ಕೂ ಹೆಚ್ಚು ಜನರನ್ನು ನಿರೀಕ್ಷಿಸಲಾಗಿದೆ. ಪ್ರತಿ ಜನಾಶೀರ್ವಾದ ಸಮಾವೇಶದಲ್ಲೂ ನಮ್ಮ ನಿರೀಕ್ಷೆಗೆ ಮೀರಿ ಜನ ಸೇರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ರಾದ ಡಿ.ಕೆ.ಶಿವಕುಮಾರ್, ಎಚ್. ಆಂಜನೇಯ, ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಎಲ್ಲ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ್ ಮಾತನಾಡಿ, ‘ಜನಾಶೀರ್ವಾದ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ನಾಯಕರು, ಪದಾಧಿಕಾರಿಗಳ ಶಾಸಕರೊಂದಿಗೆ ಸಂಯೋಜನೆ ಮಾಡುತ್ತಿದ್ದೇವೆ. ಕೇವಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಅಲ್ಲ. ಇದು ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೊಳಗೊಂಡ ಸಮಾವೇಶವಾಗಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಕಾಂಗ್ರೆಸ್‌ನ ಜಿಲ್ಲಾ ಚುನಾವಣಾ ಉಸ್ತುವಾರಿ ಆರ್. ವಿ.ವೆಂಕಟೇಶ್, ಮುಖಂಡರಾದ ಆರ್.ಕೃಷ್ಣಪ್ಪ, ಮಹಡಿ ಶಿವಮೂರ್ತಿ, ಆರತಿ ಶಿವಮೂರ್ತಿ, ಮೆಹಬೂಬ್ ಪಾಷ, ಎಂ.ಎ. ಸೇತೂರಾಂ, ಆರ್. ಕೆ.ಸರ್ದಾರ್ ಮತ್ತಿತರರು ಹಾಜರಿದ್ದರು.

ಸಮಯದ ಕೊರತೆ; ಮಠಗಳ ಭೇಟಿ ಸದ್ಯಕ್ಕಿಲ್ಲ !

‘ಚಿತ್ರದುರ್ಗದಲ್ಲಿ ಯಾವುದಾದರೂ ಮಠಗಳಿಗೆ ಭೇಟಿ ನೀಡುವ ಯೋಚನೆ ಇದೆಯಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರಪ್ಪ ಅವರು, ‘ಸದ್ಯಕ್ಕೆ ಕಾರ್ಯಕ್ರಮದ ಪಟ್ಟಿಯಲ್ಲಿ ಮಠಗಳ ಭೇಟಿ ಇಲ್ಲ. ಸಮಯದ ಕೊರತೆ ಕೂಡ ಅದಕ್ಕೆ ಕಾರಣ. ಮುಂದೆ ಮಠಗಳ ಭೇಟಿ ಬಗ್ಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸೋಣ’ ಎಂದರು.‘ಬಿಜೆಪಿಯ ಅಮಿತ್ ಶಾ ಮಠಗಳಿಗೆ ಭೇಟಿ ನೀಡಿದ್ದಾರೆ. ನೀವು ಆ ಯೋಚನೆ ಮಾಡಿದ್ದೀರೇನೋ’ ಎಂಬ ಪ್ರಶ್ನೆಗೆ, ‘ಅಮಿತ್ ಶಾ ಮತ್ತು ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಚುನಾವಣೆ ಸಮಯದಲ್ಲಿ ಮಠ ಮಂದಿರ ಜ್ಞಾಪಿಸಿಕೊಳ್ಳುತ್ತಾರೆ. ಆದರೆ, ನಮಗೆ ಮಠ, ದೇವಾಲಯಗಳ ಬಗ್ಗೆ ವಿಶೇಷ ಗೌರವ ಇದೆ. ಹಾಗಾಗಿ ಅಮಿತ್ ಶಾ ಅವರನ್ನು ಅನುಸರಿಸುವ ಪ್ರಶ್ನೆಯೇ ಇಲ್ಲ. ನಾವು ಭಕ್ತಿಯಿಂದ ಹೋಗುತ್ತೇವೆ. ಮಠ, ಚರ್ಚ್‌ಗಳ ಬಗ್ಗೆ ವಿಶೇಷ ಕಾಳಜಿ ಇದೆ. ನಮ್ಮದೇ ಸಿದ್ಧಾಂತವೇ ಬೇರೆ, ಅವರದ್ದೇ ಬೇರೆ ಸಿದ್ಧಾಂತ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

**

‘ನಾವು ಅಮಿತ್ ಶಾ ಅವರನ್ನು ಫಾಲೋ ಮಾಡುವುದಿಲ್ಲ. ಅಮಿತ್ ಶಾ ನಮ್ಮನ್ನು ಫಾಲೋ ಮಾಡುತ್ತಿದ್ದಾರೆ’ – ಮಧು ಯಾಸ್ಕಿ ಗೌಡ್,ಎಐಸಿಸಿ ಕಾರ್ಯದರ್ಶಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.