ADVERTISEMENT

ತುಂತುರು:ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 9:30 IST
Last Updated 20 ಜುಲೈ 2012, 9:30 IST

ಹೊಳಲ್ಕೆರೆ: ಮೂರ‌್ನಾಲ್ಕು ದಿನಗಳಿಂದ ತಾಲ್ಲೂಕಿನ ವಿವಿಧೆಡೆ, ತುಂತುರು ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅಲ್ಲಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದ್ದು, ರೈತರು ಅಲ್ಪಸ್ವಲ್ಪ ಹಸಿಯಲ್ಲೇ ಬಿತ್ತನೆಬೀಜ ಹಾಕುತ್ತಿದ್ದಾರೆ.

ತಾಲ್ಲೂಕಿನ ರಾಮಗಿರಿ ಮತ್ತು ಕಸಬಾ ಹೋಬಳಿಗಳ ಕೆಲವು ಭಾಗದಲ್ಲಿ ಮಳೆ ಬಂದಿದ್ದು, ಮೆಕ್ಕೆಜೋಳ ಬಿತ್ತನೆ ಆರಂಭಿಸಲಾಗಿದೆ. ಮೆಕ್ಕೆಜೋಳ ಬಿತ್ತನೆಗೆ ತಡವಾಗಿದ್ದರೂ, ಅನಿವಾರ್ಯವಾಗಿ ಬಿತ್ತನೆ ಮಾಡುತ್ತಿದ್ದಾರೆ. 

ಮೆಕ್ಕೆಜೋಳಕ್ಕೆ ಹೆಸರಾದ ಬಿ. ದುರ್ಗ ಹೋಬಳಿಯ ಚಿಕ್ಕಜಾಜೂರು, ಅಂದನೂರು, ಸಾಸಲು ಸುತ್ತಮುತ್ತ ಮಳೆಯಿಲ್ಲದೆ ಬಿತ್ತನೆ ಇನ್ನೂ ಆರಂಭವಾಗಿಲ್ಲ. ತಾಳ್ಯ ಹೋಬಳಿಯ ಹೊರಕೆರೆ ದೇವರಪುರ, ಉಪ್ಪರಿಗೇನಹಳ್ಳಿ, ಚಿತ್ರಹಳ್ಳಿ, ಟಿ. ನುಲೇನೂರು ಭಾಗದಲ್ಲಿಯೂ ಬಿತ್ತನೆ ಕಾರ್ಯ ನಡೆದಿಲ್ಲ.

ಬೀಜಗೊಬ್ಬರ ನಷ್ಟ: ಕಳೆದ ವಾರ ಬಂದ ಸೋನೆ ಮಳೆಯಿಂದ ಭೂಮಿಯ ಮೇಲ್ಪದರದ ಒಂದು ಇಂಚು ಮಾತ್ರ ಹಸಿಯಾಗಿತ್ತು. ಬಿತ್ತನೆಗೆ ತಡವಾಗುತ್ತದೆ ಹಾಗೂ ಮುಂದೆ ಮಳೆ ಬರಬಹುದು ಎಂಬ ನಂಬಿಕೆಯಿಂದ ಕೆಲ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು.

ಆದರೆ, ಬೀಜ ಮೊಳೆಯುವಷ್ಟು ಹಸಿಯಿಲ್ಲದೆ ಬೆಳೆ ಹುಟ್ಟಲೇ ಇಲ್ಲ. ಇದರಿಂದ ಬೀಜ ಗೊಬ್ಬರದ ಹಣವನ್ನೂ ಕಳೆದುಕೊಂಡಿದ್ದಾರೆ. ರಾಮಗಿರಿ, ತಾಳಿಕಟ್ಟೆ, ಮಲ್ಲಾಡಿಹಳ್ಳಿ ಭಾಗದಲ್ಲಿ ಕಪ್ಪು ಮಣ್ಣಿನ ಭೂಮಿಯಿದ್ದು, ಪ್ರತೀ ವರ್ಷ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು.

ಮಣ್ಣು ಪಾಲಾಯಿತು...
`ದೇವರಮೇಲೆ ಭಾರ ಹಾಕಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೀಜ ಹಾಕಿದ್ದೆವು. ಬಿತ್ತಿದ ನಂತರ ಒಮ್ಮೆಯೂ ಮಳೆ ಬರಲಿಲ್ಲ. ಇದರಿಂದ ಬೀಜಗಳು ಹುಟ್ಟದೆ, ಬೀಜ, ಗೊಬ್ಬರದ ಹಣವೆಲ್ಲ ಮಣ್ಣುಪಾಲಾಯಿತು~ ಎಂದು ಹತಾಶರಾಗಿ ನುಡಿಯುತ್ತಾರೆ ತಾಳಿಕಟ್ಟೆ ಗ್ರಾಮದ ರೈತ ಅಂಗಡಿ ಮುದಿಯಪ್ಪ.

ನಳನಳಿಸುವ ಬೆಳೆ: ತಾಲ್ಲೂಕಿನ ಎಮ್ಮೆಹಟ್ಟಿ, ಸಾಂತೇನಹಳ್ಳಿ, ಆವಿನಹಟ್ಟಿ, ಇಡೇಹಳ್ಳಿ, ಉಗಣೆಕಟ್ಟೆ ವಡ್ಡರಹಟ್ಟಿ ಸುತ್ತಮುತ್ತ ಕಳೆದ ತಿಂಗಳು ಒಂದಿಷ್ಟು ಮಳೆ ಸುರಿದಿದ್ದರಿಂದ ರೈತರು ವೆುಕ್ಕೆಜೋಳ, ಹೈಬ್ರಿಡ್ ಹತ್ತಿ, ಎಳ್ಳು ಬಿತ್ತನೆ ಮಾಡಿದ್ದರು. ಆಗೊಮ್ಮೆ, ಈಗೊಮ್ಮೆ ಬಂದ ಸೋನೆ ಮಳೆಗೆ ಬೆಳೆ ಉತ್ತಮವಾಗಿ ಬಂದಿದ್ದು, ಕಳೆದ ಒಂದು ವಾರದಿಂದ ಬಂದ ತುಂತುರು ಮಳೆಗೆ ಈ ಬೆಳೆಗಳು ನಳನಳಿಸುತ್ತಿವೆ. ಎಡೆಕುಂಟೆ ಹೊಡೆಯುವ ಕಾರ್ಯ ನಡೆಯುತ್ತಿದ್ದು, ಬೆಳೆಗೆ ಮೇಲುಗೊಬ್ಬರ ಕೊಡಲಾಗುತ್ತಿದೆ. ಈಗ ಇವು ಚಿಕ್ಕ ಬೆಳೆ ಆಗಿರವುದರಿಂದ ಇಷ್ಟು ಮಳೆ ನಡೆಯುತ್ತದೆ. ಆದರೆ ಇನ್ನು ಮುಂದೆ ಬೆಳೆ ದೊಡ್ಡದಾಗುವುದರಿಂದ ಒಮ್ಮೆ ಜೋರುಮಳೆ ಬರಬೇಕು ಎನ್ನುತ್ತಾರೆ ಇಲ್ಲಿನ ರೈತರು.

`ಮೆಕ್ಕೆಜೋಳವನ್ನು ಜುಲೈ 15ರ ಒಳಗೆ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಈ ಬಾರಿ ಮಳೆ ಬರದಿರುವುದರಿಂದ ರೈತರು ತಡವಾಗಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ಬೆಳೆ ತೆನೆಕಟ್ಟುವ ಹಂತದಲ್ಲಿ ಮಳೆ ಕಡಿಮೆಯಾಗುವ ಸಂಭವ ಇದೆ ಎನ್ನುತ್ತಾರೆ ಅಧಿಕಾರಿಗಳು.

ಮತ್ತಷ್ಟು ಚುರುಕು...
ಈಗ ರಾಗಿ ಬಿತ್ತನೆಗೆ ಸೂಕ್ತ ಸಮಯವಾಗಿದ್ದು, ಕಳೆದ ಒಂದು ವಾರದಿಂದ ಬಿತ್ತನೆ ಚುರುಕಾಗಿದೆ. 54,900 ಹೆಕ್ಟೇರ್ ಬಿತ್ತನೆಯ ಗುರಿಯಲ್ಲಿ ಸದ್ಯ 11,250 ಹೆಕ್ಟೇರ್ ಬಿತ್ತನೆಯಾಗಿದೆ.

ಇನ್ನೊಂದು ವಾರದಲ್ಲಿ ಇದು ಸುಮಾರು 15 ಸಾವಿರ ಹೆಕ್ಟೇರ್ ತಲುಪುವ ನಿರೀಕ್ಷೆ ಇದೆ. ಮುಂದೆ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಬಿತ್ತನೆ ಮತ್ತಷ್ಟು ಚುರುಕುಗೊಳ್ಳಲಿದೆ~ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ವೈ. ಶ್ರೀಧರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.