ADVERTISEMENT

ತುರುವನೂರು:ಪಿಡಿಒ ವಿರುದ್ಧ ಕ್ರಮಕ್ಕೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 4:30 IST
Last Updated 10 ಅಕ್ಟೋಬರ್ 2012, 4:30 IST

 ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯ ತೋರುತ್ತಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕಳೆದ 8 ತಿಂಗಳ್ಲ್ಲಲಿ 10 ದಿನಗಳು ಮಾತ್ರ ಕರ್ತವ್ಯಕ್ಕೆ ಹಾಜರಾಗಿ ಯಾವುದೇ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ ಹಾಗೂ ಜಮಾ ಖರ್ಚು ತಿಳಿಸದೆ ತಪ್ಪಿಸಿಕೊಂಡಿರುವ ಪಿಡಿಒ ಬಸವರಾಜ್ ಅವರಿಗೆ  ನೋಟಿಸ್ ಜಾರಿ ಮಾಡಲು ಮತ್ತು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು ಎಂದು ಗ್ರಾ.ಪಂ. ಕಾರ್ಯದರ್ಶಿ ಎ.ಕೆ. ಯೋಗೇಶಪ್ಪ ತಿಳಿಸಿದ್ದಾರೆ.

ಗ್ರಾಮದಲ್ಲಿ ನಡೆಯುತ್ತಿರುವ 13ಲಕ್ಷದ ಪೈಪ್‌ಲೈನ್ ಕಾಮಗಾರಿ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಹಣ ನೀಡದಂತೆ ಸಭೆ ನಿರ್ಧಾರ ಕೈಗೊಂಡಿದೆ. ಜತೆಗೆ ಅಕ್ರಮ ನಲ್ಲಿಗಳನ್ನು ನಿಯಮಾನುಸಾರ ಸಕ್ರಮಗೊಳಿಸಲು ಸಭೆ ನಿರ್ಧರಿಸಿತು. ಸಾರ್ವಜನಿಕರಿಗೆ ಅತಿ ಸಮಸ್ಯೆಯಾಗಿರುವ ಬಸ್ ನಿಲ್ದಾಣವನ್ನು ಕೂಡಲೇ ಮೊದಲಿದ್ದ ಬಸ್‌ನಿಲ್ದಾಣದ ಜಾಗದಲ್ಲಿ  ಬಿಆರ್‌ಜಿಎಫ್ ಯೋಜನೆಯ ಹಣದಲ್ಲಿ ಕಟ್ಟುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಹಳ್ಳಿಗಳ ಗ್ರಾಮ ನೈರ್ಮಲ್ಯಕ್ಕಾಗಿ ಇಲ್ಲಿಯವರೆಗೂ ಹಣ ಪಾವತಿ ಮಾಡದಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಡಿ.ಆರ್. ಮಂಜುನಾಥ್, ಲೆಕ್ಕ ಪರಿಶೋಧಕ ಬೋರಣ್ಣ ಹಾಜರಿದ್ದರು. 

 ಬ್ಯಾಂಕ್‌ಗೆ ಆಯ್ಕೆ

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಈಚೆಗೆ ನಡೆದ ಸಂಘದ ಕಾರ್ಯಕಾರಿ ಮಂಡಳಿ ಆಡಳಿತ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಜಿ.ಬಿ. ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಎ.ಟಿ. ಪ್ರಭು ಕೋಗುಂಡೆ ಆಯ್ಕೆಯಾಗಿದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಎಚ್. ಚನ್ನವೀರಪ್ಪ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.