ADVERTISEMENT

ಬಸವ ಜಯಂತಿ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 9:00 IST
Last Updated 14 ಏಪ್ರಿಲ್ 2013, 9:00 IST

ಚಿತ್ರದುರ್ಗ: ಸಾರ್ವಜನಿಕರ ಪ್ರೋತ್ಸಾಹ, ಬಲ ಇಲ್ಲವಾದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬಸವ ಜಯಂತಿ ವರ್ಷಾಚರಣೆಯ ಶತಮಾನೋತ್ಸವ ವರ್ಷದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ಬಸವ ಜಯಂತಿ ಉತ್ಸವದ ಅಂಗವಾಗಿ ಹಳ್ಳಿಗೆ ಏಕರಾತ್ರಿ, ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಕಾರ್ಯಕ್ರಮ, ಏಡ್ಸ್ ರೋಗಿಗಳ ಸಮಾವೇಶ, ದುಬಾರೆಯಲ್ಲಿ ಜೇನುಕುರುಬರ ಜತೆ ಕಾರ್ಯಕ್ರಮ ಹೀಗೆ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಸವತತ್ವ ಪ್ರಸಾರ ಮಾಡುತ್ತಿದ್ದೇವೆ. ಮುಂಬರುವ ಬಸವ ಜಯಂತಿಗೆ ನೂರು ವರ್ಷದ ಸಂಭ್ರಮ ಹಾಗೂ ಮಠದ ಭಕ್ತಾರ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ  ಕೆ.ಎಂ. ವೀರೇಶ್ ಅವರು ಮಾತನಾಡಿ, ಶರಣಸಂಸ್ಕತಿ ಉತ್ಸವದ ರೀತಿಯಲ್ಲಿ ಬಸವ ಜಯಂತಿಯನ್ನು ಮೂರು ದಿನಗಳ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು. ವಿಜಯಕುಮಾರ್, ಮಲ್ಲಣ್ಣ, ಷಣ್ಮುಖಪ್ಪ ಮೊದಲಾದವರು ವೀರೇಶ್ ಅವರ ಸಲಹೆಯನ್ನು ಸ್ವೀಕರಿಸಬಹುದು ಎಂದರು. ಇದು ಚಿತ್ರದುರ್ಗಕ್ಕೆ ಸೀಮಿತವಾಗದೇ ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು ಎಂದು ಷಣ್ಮುಖಪ್ಪ ಸಲಹೆ ನೀಡಿದರು.

ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಬಸವತತ್ವದ ವಿಚಾರಗಳು ಜನರಿಗೆ ತಲುಪಿಲ್ಲ. ಬಸವತತ್ವದಲ್ಲಿರುವುದು ಸಂವಿಧಾನದಲ್ಲಿದೆ. ಅಂದಿನ ಅನುಭವ ಮಂಟಪವೇ ಇಂದಿನ ವಿಧಾನಸಭೆ ಮತ್ತು ಲೋಕಸಭೆ ಎಂದರು.

ಮುರುಘರಾಜೇಂದ್ರ ಒಡೆಯರ್,  ಜಿ.ಎಸ್. ಮಂಜುನಾಥ್, ತಾಜ್‌ಪೀರ್,  ಫಾದರ್ ರಾಜು, ಕೃಷ್ಣಪ್ಪ, ಸುನಿತಾ ಮಲ್ಲಿಕಾರ್ಜುನ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪ್ರಭಾಕರ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಈ. ಚಿತ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.