ADVERTISEMENT

ಮೊಳಕಾಲ್ಮುರು: ರೈತರಲ್ಲಿ ಆತಂಕದ ಕಾರ್ಮೋಡ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 5:10 IST
Last Updated 21 ಜೂನ್ 2012, 5:10 IST
ಮೊಳಕಾಲ್ಮುರು: ರೈತರಲ್ಲಿ ಆತಂಕದ ಕಾರ್ಮೋಡ
ಮೊಳಕಾಲ್ಮುರು: ರೈತರಲ್ಲಿ ಆತಂಕದ ಕಾರ್ಮೋಡ   

ಮೊಳಕಾಲ್ಮುರು: ಮೂರ‌್ನಾಲ್ಕು ವರ್ಷಗಳಿಂದ ಸತತ ತೊಂದರೆಗಳನ್ನು ಅನುಭವಿಸಿಕೊಂಡು ಬಂದಿರುವ ತಾಲ್ಲೂಕಿನ ರೈತರು ಈ ವರ್ಷವೂ ಅದೇ ಸ್ಥಿತಿ ಅನುಭವಿಸಬೇಕಾಗಬಹುದು ಎಂಬ ಪರಿಸ್ಥಿತಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ.

ಜೂನ್ ಮುಗಿಯುತ್ತಾ ಬಂದರೂ ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲು ಮುಂಗಾರು ಕರುಣೆ ತೋರಿಸದ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಈ ವರ್ಷವೂ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಲಿದೆ ಎಂಬ ಭಾವನೆ ರೈತರಲ್ಲಿ ಮನೆ ಮಾಡುವ ಮೂಲಕ ತಾಲ್ಲೂಕಿನ ಯಾವುದೇ ಹಳ್ಳಿಗೆ ಹೋದರೂ ಹತಾಶಾ ಮನೋಭಾವದ ನುಡಿಗಳು ವ್ಯಾಪಕವಾಗಿ ಕೇಳಿಸುತ್ತಿವೆ.

ತಾಲ್ಲೂಕು ಕೃಷಿ ಇಲಾಖೆ ಮೂಲಗಳ ಪ್ರಕಾರ ವಾಡಿಕೆ ಮಳೆಗಿಂತಲೂ ಇಲ್ಲಿ ಹೆಚ್ಚಿನ ಮಳೆ ಈವರೆಗೆ ಬಿದ್ದಿದೆ. ಆದರೆ, ಇದು ಏಪ್ರಿಲ್‌ನಲ್ಲಿ ಮಾತ್ರ ಬಿದ್ದಿದ್ದು, ನಂತರ ಮೇ, ಜೂನ್‌ನಲ್ಲಿ ಪೂರ್ಣವಾಗಿ ಇಲ್ಲವಾಗಿದೆ. ಈ ಕಾರಣದಿಂದಾಗಿ ಬಿತ್ತನೆ ಪೂರಕ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ರೈತರ ಅಳಲು.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಆಗಿದ್ದು, ಒಟ್ಟು 28 ಸಾವಿರ ಹೆಕ್ಟೇರ್ ಬಿತ್ತನೆಭೂಮಿ ಪೈಕಿ ಶೇಂಗಾವನ್ನು ಅಂದಾಜು 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಈ ಬಾರಿ ಇಲಾಖೆ ವತಿಯಿಂದ ಪ್ರತಿ ಕ್ವಿಂಟಲ್ ಬಿತ್ತನೆಬೀಜವನ್ನು ರೂ 1,200 ಸಬ್ಸೀಡಿ ಹೊರತುಪಡಿಸಿ ರೂ 4,600ಕ್ಕೆ ನೀಡಲಾಗುತ್ತಿದೆ. ಈ ಬಾರಿ 4,047 ಕ್ವಿಂಟಲ್ ಬಿತ್ತನೆ ಶೇಂಗಾ ದಾಸ್ತಾನು ಮಾಡಲಾಗಿದ್ದು, ಈ ಪೈಕಿ 2,500 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಮೂಗಳು ತಿಳಿಸಿವೆ.

ಹಿರಿಯ ರೈತರಾದ ಬಸಣ್ಣ, ತಿಪ್ಪೇಸ್ವಾಮಿ, ಮಂಜಣ್ಣ ಮತ್ತಿತರರು ಹೇಳುವ ಪ್ರಕಾರ ಪ್ರತಿ ಪಲ್ಲ ಬೀಜ (100 ಕೆಜಿ) ಬಿತ್ತನೆ ಮಾಡಲು ಈ ವರ್ಷ ಬೀಜಕ್ಕೆ ರೂ 7 ಸಾವಿರ, ಗೊಬ್ಬರಕ್ಕೆ ರೂ 3 ಸಾವಿರ ಹಾಗೂ ಬಿತ್ತನೆ ಖರ್ಚು, ಕಳೆ ತೆಗೆಸಲು, ಮಡಿಕೆ ಹೊಡೆಯಲು ಮತ್ತು ಅಂತಿಮವಾಗಿ ಗಿಡಗಳನ್ನು ನೆಲದಿಂದ ಕೀಳುವ ಕಾರ್ಯಕ್ಕೆ ಒಟ್ಟು ರೂ 20,000 ಸಾವಿರ ಖರ್ಚು ಬರಲಿದೆ ಎಂದು ಮಾಹಿತಿ ನೀಡುತ್ತಾರೆ.

ಈ ಖರ್ಚು ವೆಚ್ಚಗಳನ್ನು ನೋಡಿದಾಗ ಪ್ರತಿ ಎಕರೆಗೆ ಆರು ಕ್ವಿಂಟಲ್ ಇಳುವರಿ ಬಂದರೆ ಒಂದು ಪ್ರತಿ 100 ಕೆಜಿ ಬಿತ್ತನೆಬೀಜಕ್ಕೆ 18-20 ಕ್ವಿಂಟಲ್ ಇಳುವರಿ ಬಂದಾಗ ಮಾತ್ರ ಈಗಿನ ದರಕ್ಕೆ ಹೋಲಿಕೆ ಮಾಡಿದಲ್ಲಿ ತುಸು ಲಾಭ ಪಡೆಯಲು ಸಾಧ್ಯವಿದೆ. ದರ ಕುಸಿತ ಹಾಗೂ ಅಲ್ಪಪ್ರಮಾಣದ ಇಳುವರಿ ಕುಸಿತವಾದರೂ ಸಹ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳುತ್ತಾರೆ.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಕೆಂಗೇಗೌಡ ಅವರ ಪ್ರಕಾರ, ತಾಲ್ಲೂಕಿನಲ್ಲಿ ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಕೆಲ ವರ್ಷಗಳಿಂದ ಶೇಂಗಾ ರೈತರಿಗೆ ಕೈಕೊಡುತ್ತಾ ಬಂದಿರುವ ಕಾರಣ ಶೇಂಗಾ ಬೆಳೆ ಬದಲು ಬೇರೆ ಬೆಳೆ ಬೆಳೆಯಲು ಇದು ಸಕಾಲವಾಗಿದೆ. ಔಡಲ, ತೊಗರಿ, ಸಜ್ಜೆ ಇತರೆ ಪರ್ಯಾಯ ಬೆಳೆಗಳನ್ನು ಬಿತ್ತನೆ ಮಾಡಿದಲ್ಲಿ ಮಳೆ ವ್ಯತ್ಯಾಸಕ್ಕೆ ಹಾಗೂ ಬಿತ್ತನೆ ದರ ಭರಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ರೈತರು ಗಾಢ ಯೋಚಿಸಬೇಕಿದೆ ಎಂದು ಮನವಿ ಮಾಡುತ್ತಾರೆ.

ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಗತ್ಯ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹಿರಿಯ ರೈತರು ಮನವಿ ಮಾಡುತ್ತಾರೆ.

ವರ್ಗಾವಣೆ ನ್ಯಾಯವೇ: ತಾಲ್ಲೂಕು ಕೃಷಿ ಇಲಾಖೆಯಲ್ಲಿ ಶೇ. 70ರಷ್ಟು ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಇರುವ ಸಿಬ್ಬಂದಿ ಕಷ್ಟಪಟ್ಟು ನಿಭಾಯಿಸಿಕೊಂಡು ಹೋಗುವ ಹಾಗೂ ಬಿತ್ತನೆ ಸಕಾಲದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಡಾ.ಕೆಂಗೇಗೌಡ ಅವರನ್ನು ಮಂಗಳವಾರ ಏಕಾ-ಏಕಿ ವರ್ಗಾವಣೆ ಮಾಡುವ ಮೂಲಕ ತಾಲ್ಲೂಕಿನ ರೈತರ ಮೇಲೆ ಸರ್ಕಾರ ಬರೆ ಎಳೆದಿದೆ. ಸುವರ್ಣಭೂಮಿ, ಬಿತ್ತನೆಬೀಜ ವಿತರಣೆ, ಭೂಚೇತನಾ ಕಾರ್ಯಗಳು ಪ್ರಗತಿಯಲ್ಲಿ ಇರುವಾಗ ವರ್ಗಾವಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಮತ್ತು ಕೂಡಲೇ ಇದನ್ನು ತಾತ್ಕಾಲಿಕ ರದ್ದು ಮಾಡಬೇಕು ಎಂದು ಸಿಪಿಐ ತಾಲ್ಲೂಕು ಘಟಕ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.