ADVERTISEMENT

ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜಪಮಾಲಾ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:05 IST
Last Updated 5 ಏಪ್ರಿಲ್ 2013, 9:05 IST

ಚಿತ್ರದುರ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸಂಸತ್ತಿನಲ್ಲಿ ಶಾಸನ ರೂಪಿಸಲು ಜನಜಾಗೃತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀರಾಮ ಜಪಮಾಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತರ್‌ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ತಿಳಿಸಿದರು.

ಗುರುವಾರ ಹೊಸಪೇಟೆಗೆ ತೆರಳುವ ಮಾರ್ಗದಲ್ಲಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಭಮೇಳದಲ್ಲಿ ಸೇರಿದ ಸಂತಸಮ್ಮೇಳನ ಶ್ರೀರಾಮ ಜನ್ಮ ಭೂಮಿಯಲ್ಲೇ ಮಂದಿರ ನಿರ್ಮಿಸಬೇಕು ಎಂದು ಒಮ್ಮತದ ನಿರ್ಣಯ ಕೈಗೊಂಡಿದೆ. ಅದು ಸಾಕಾರವಾಗಬೇಕಾದರೆ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ಆದ್ದರಿಂದ ರಾಮಮಂದಿರ ನಿರ್ಮಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಏ. 11ರ ವಿಜಯ ಸಂವತ್ಸರದ ಯುಗಾದಿ ಚೈತ್ರಶುದ್ಧ ಪ್ರತಿಪದೆಯಿಂದ ಮೇ 13ರ ವೈಶಾಖ ಶುದ್ಧ ತದಿಗೆ ಅಕ್ಷಯ ತೃತೀಯವರೆಗೆ ದೇಶಾದ್ಯಂತ ಶ್ರೀರಾಮ ಜಪಮಾಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ಗೆ 1994ರಲ್ಲಿ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ರಾಮಜನ್ಮ ಭೂಮಿ ಹಿಂದೂಗಳಿಗೆ ಸೇರಿದೆ ಎಂದು 3300 ವರ್ಷಗಳ ಹಿಂದಿನ ಅನೇಕ ಪೂರಕ ದಾಖಲೆಗಳು ಲಭ್ಯವಾಗಿದೆ. ಈ ದಾಖಲೆಗಳನ್ನು ಆಧರಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದೆ ಎಂದು ಆದೇಶ ಮಾಡಿದೆ. ಈ ಆದೇಶದ ಅನ್ವಯ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಭಾರತ- ಪಾಕಿಸ್ತಾನ- ಬಾಂಗ್ಲಾ ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿ ಶೇಕಡಾ 10ರಷ್ಟು ಹಿಂದೂಗಳಿದ್ದರು. ಈಗ ಅಲ್ಲಿ ಶೇಕಡಾ 2ಕ್ಕಿಂತ ಕಡಿಮೆ ಹಿಂದೂಳಿದ್ದಾರೆ. ಅದೇ ರೀತಿ ಬಾಂಗ್ಲಾ ದೇಶದಲ್ಲಿ ಶೇಕಡಾ 28ರಷ್ಟು  ಹಿಂದೂಗಳಿದ್ದರು. ಆದರೆ, ಈಗ ಅಲ್ಲಿ ಕೇವಲ ಶೇಕಡಾ  8ರಷ್ಟು ಹಿಂದೂ  ಗಳಿದ್ದಾರೆ.  ಪಾಕಿಸ್ತಾನ  ಮತ್ತು ಬಾಂಗ್ಲಾ  ದೇಶದಲ್ಲಿ  ಹಿಂದೂಗಳನ್ನು ಗುರಿ ಆಗಿಟ್ಟುಕೊಂಡು ಜನಾಂಗೀಯ ಹತ್ಯೆ,  ಆಸ್ತಿ-ಪಾಸ್ತಿಗೆ ನಷ್ಟ ಮಾಡಲಾಗುತ್ತಿದ್ದು, ಹಿಂದೂಗಳು ಅಲ್ಲಿ ಭಯದ ಭೀತಿಯಲ್ಲಿ ವಾಸ ಮಾಡುತ್ತಿದ್ದಾರೆಂದು ಆತಂಕ ವ್ಯಕ್ತ ಪಡಿಸಿದರು.

ನುಸುಳಕೋರರು ಬಾಂಗ್ಲಾ ದೇಶದಿಂದ ಭಾರತಕ್ಕೆ 3 ಕೋಟಿಯಷ್ಟು ಜನರು ನುಸುಳಿ ಬಂದಿದ್ದಾರೆ. ಈ ನುಸುಳುಕೋರರಿಂದ ಲೂಟಿ, ಅತ್ಯಾಚಾರ, ಉದ್ಯೋಗ ಕಿತ್ತುಕೊಳ್ಳುವಿಕೆ, ಕಾನೂನು ಸುವ್ಯವಸ್ಥೆ ಹದಗೆಡಿಸುವುದು ಮತ್ತಿತರ ಅಕ್ರಮಗಳು ನಡೆಯುತ್ತಿದ್ದು, ಇವರೆಲ್ಲರನ್ನು ಭಾರತದಿಂದ ಹೊಡೆದು ಓಡಿಸಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲದೆ ಹಿಂದೂಗಳ ಮೇಲೆ ಕ್ರೌರ್ಯ ಎಸಗುತ್ತಿರುವ ಬಾಂಗ್ಲಾ-ಪಾಕಿಸ್ತಾನದ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಾಕಿಸ್ತಾನವು ರೂ.1000, 500, 100 ಮುಖ ಬೆಲೆಯ ನಕಲಿ ನೋಟುಗಳನ್ನು ನೇಪಾಳದ ಮೂಲಕ ಭಾರತ ದೇಶಕ್ಕೆ ರವಾನೆ ಮಾಡುತ್ತಿದ್ದು, ಇದರಿಂದ ಭಾರತೀಯ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಣದುಬ್ಬರ, ಆರ್ಥಿಕ ಅಸ್ಥಿರತೆ ಕಾಡಲಿದೆ. ಕೇಂದ್ರ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ನಕಲಿ ನೋಟುಗಳಿಗೆ ಕಡಿವಾಣ ಹಾಕಬೇಕೆಂದು ತೊಗಾಡಿಯಾ ಆಗ್ರಹಿಸಿದರು.

ಹಿಂದೂಗಳಿಗೆ ತೊಂದರೆಯಾದರೆ ಅವರ ನೆರವಿಗೆ ವಿಶ್ವ ಹಿಂದೂ ಪರಿಷತ್ ಧಾವಿಸಲಿದೆ. ಅದಕ್ಕಾಗಿ ಉಚಿತ ದೂರವಾಣಿ ಸಂಖ್ಯೆ ದಿನದ 24ಗಂಟೆ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.  ದೂರವಾಣಿ ಸಂಖ್ಯೆ: 020668 03300, 075886 82181ಗೆ ಸಂಪರ್ಕಿಸುವ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.