ADVERTISEMENT

ಸರ್ಕಾರ ನಡೆಸಲು ಬಡವರ ಹಣವೇ ಬೇಕಿತ್ತಾ ?

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 8:35 IST
Last Updated 30 ಡಿಸೆಂಬರ್ 2017, 8:35 IST
ಹೊಳಲ್ಕೆರೆಯ ಮುಖ್ಯ ವೃತ್ತದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಎಂ.ಚಂದ್ರಪ್ಪ ಮಾತನಾಡಿದರು.
ಹೊಳಲ್ಕೆರೆಯ ಮುಖ್ಯ ವೃತ್ತದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಎಂ.ಚಂದ್ರಪ್ಪ ಮಾತನಾಡಿದರು.   

ಹೊಳಲ್ಕೆರೆ: ‘ನಾನು ಶಾಸಕನಾಗಿದ್ದಾಗ ಬಡ ವ್ಯಾಪಾರಿಗಳಿಗೆ ಅನುಕೂಲ ಆಗಲಿ ಎಂದು ವಾಣಿಜ್ಯ ಮಳಿಗೆ ನಿರ್ಮಿಸಿದರೆ, ಸಚಿವ ಎಚ್.ಆಂಜನೇಯ ಅವುಗಳನ್ನು ಹರಾಜು ಹಾಕುವ ಮೂಲಕ ಬಡವರಿಗೆ ಅನ್ಯಾಯ ಮಾಡಿದರು’ ಎಂದು ಬಿಜೆಪಿ ಮುಖಂಡ ಎಂ.ಚಂದ್ರಪ್ಪ ದೂರಿದರು. ನಗರದ ಮುಖ್ಯವೃತ್ತದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಬೀದಿಬದಿಯಲ್ಲಿ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಬಡವರ ಮನವೊಲಿಸಿ ಅದೇ ಸ್ಥಳದಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದೆ. ಮೂಲ ವ್ಯಾಪಾರಿಗಳಿಗೆ ಹೊಸ ಮಳಿಗೆಗಳನ್ನು ಕೊಡುವ ಭರವಸೆಯನ್ನೂ ಕೊಟ್ಟಿದ್ದೆ.

ಮಳಿಗೆ ನಿರ್ಮಾಣ ಕಾರ್ಯ ಮುಗಿಯುವ ವೇಳೆಗೆ ನನ್ನ ಅಧಿಕಾರ ಅವಧಿಯೂ ಮುಗಿಯಿತು. ನಂತರ ಗೆದ್ದು ಬಂದ ಎಚ್.ಆಂಜನೇಯ ಅವರು ಮಳಿಗೆಗಳನ್ನು ಬಡವರಿಗೆ ಕೊಡದೆ ಹರಾಜು ಹಾಕಿಸಿದರು. ಇದರಿಂದ ಕಂಗಾಲಾದ ವ್ಯಾಪಾರಿಗಳು ಮನೆಯಲ್ಲಿನ ಒಡವೆ, ಆಸ್ತಿ ಮಾರಾಟ ಮಾಡಿ ₹ 8–10ಲಕ್ಷ ಠೇವಣಿ ಕಟ್ಟಿ ಮಳಿಗೆ ಪಡೆಯುವಂತಾಯಿತು. ಸರ್ಕಾರಕ್ಕೆ ವಿವಿಧ ಮೂಲಗಳಿಂದ ತೆರಿಗೆ ರೂಪದಲ್ಲಿ ಹಣ ಬರುತ್ತದೆ. ಸರ್ಕಾರ ನಡೆಸಲು ಬಡವರ ಹಣವೇ ಬೇಕಿತ್ತಾ’ ಎಂದು ಪ್ರಶ್ನಿಸಿದರು.

ADVERTISEMENT

‘ಭರಮಸಾಗರದಲ್ಲಿ ಶಾಸಕನಾಗಿದ್ದಾಗ ನೂರಾರು ಕಿ.ಮೀ.ರಸ್ತೆ ನಿರ್ಮಿಸಿದ್ದರಿಂದ ಜನರೇ ನನಗೆ ‘ರಸ್ತೆರಾಜ’ ಎಂದು ಬಿರುದು ಕೊಟ್ಟಿದ್ದರು. ಸ್ವಾತಂತ್ರ್ಯ ಬಂದು 70ವರ್ಷ ಆದರೂ ತಾಲ್ಲೂಕಿಗೆ ಒಂದು ಎಪಿಎಂಸಿ ಇರಲಿಲ್ಲ. ಇಲ್ಲಿನ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಚಿತ್ರದುರ್ಗ, ದಾವಣಗೆರೆಗೆ ಹೋಗಬೇಕಾಗಿತ್ತು. ಹೊಸದುರ್ಗದಲ್ಲಿದ್ದ ಎಪಿಎಂಸಿಯನ್ನು ಪ್ರತ್ಯೇಕಗೊಳಿಸಿ ತಾಲ್ಲೂಕಿಗೆ ಹೊಸ ಎಪಿಎಂಸಿ ಮಂಜೂರು ಮಾಡಿಸಿದೆ’ ಎಂದು ಚಂದ್ರಪ್ಪ ಹೇಳಿದರು.

‘10 ದಿನಗಳಿಂದ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿದ್ದೇನೆ. ಎಲ್ಲಾ ಕಡೆ ಜನ ಬಿಜೆಪಿಗೆ ಹೆಚ್ಚು ಒಲವು ತೋರಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ.

ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯ ಮತ್ತಷ್ಟು ಅಭಿವೃದ್ಧಿ ಆಗಲಿದೆ. ನೀವು ನನಗೆ ಆಶೀರ್ವಾದ ಮಾಡಿದರೆ ತಾಲ್ಲೂಕು ಕೂಡ ಮಾದರಿ ಆಗಲಿದೆ’ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಶರಣಪ್ಪ, ರಾಜಶೇಖರ್, ಪರಮೇಶ್ವರಪ್ಪ, ಡಿ.ಸಿ.ಮೋಹನ್, ಸಾಮಿಲ್ ಶಿವಣ್ಣ, ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.