ADVERTISEMENT

ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ.ಮನಸೂರೆಗೊಂಡ ಮೈಸೂರು ರೇಷ್ಮೆಸೀರೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 9:50 IST
Last Updated 20 ಫೆಬ್ರುವರಿ 2011, 9:50 IST
ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ.ಮನಸೂರೆಗೊಂಡ ಮೈಸೂರು ರೇಷ್ಮೆಸೀರೆ
ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ.ಮನಸೂರೆಗೊಂಡ ಮೈಸೂರು ರೇಷ್ಮೆಸೀರೆ   

ಚಿತ್ರದುರ್ಗ:  ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ಶನಿವಾರ ನಗರದ ಮದಕರಿ ವೃತ್ತದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮೈಸೂರು ರೇಷ್ಮೆ ಸೀರೆಗಳಪ್ರದರ್ಶನ ಹಾಗೂ ಮಾರಾಟ ಮೇಳ’ಕ್ಕೆ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಂಗೇಗೌಡ ಚಾಲನೆ ನೀಡಿದರು.  ಐದು ದಿನ  ನಡೆಯುವ ಮೇಳದಲ್ಲಿ ಜರಿ ಸೀರೆಗಳು, ಕಸೂತಿ ಸೀರೆಗಳು, ವಿವಾಹ ಸಂಗ್ರಹದ ಸೀರೆಗಳನ್ನು ಥ್ರೆಡ್ಸ್ ಆಫ್ ಗೋಲ್ಡ್ ಹೆಸರಿನಡಿ ಪರಿಚಯಿಸಿದೆ. ವಾಟರ್‌ಪ್ರೂಫ್ ಸೀರೆ ಸೇರಿದಂತೆ ವಿವಿಧ ಬಗೆಯ ಸೀರೆಗಳು ಪ್ರದರ್ಶನದಲ್ಲಿ ಇಡಲಾಗಿದೆ. ಆರಂಭಿಕ ಸೀರೆಯ ಬೆಲೆ ಸುಮಾರು 6 ಸಾವಿರದಿಂದ 56 ಸಾವಿರ ರೂವರೆಗೆ ಕಾಣಬಹುದು.

ಖಾಸಗಿ ಆಸ್ಪತ್ರೆಯ ಡಾ. ಜಯಶ್ರೀ ಪ್ರಸಾದ್ ಮೇಳದಲ್ಲಿ 5 ವಿವಿಧ ಬಗೆಯ ನೂತನ ಮೈಸೂರು ರೇಷ್ಮೆ ಸೀರೆಗಳನ್ನು ಬಿಡುಗಡೆಗೊಳಿಸಿದರು.  ಮೇಳ ಉದ್ಘಾಟಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಂಗೇಗೌಡ, ವಿದೇಶಗಳ ಉತ್ಪಾದನಾ ವಸ್ತುಗಳನ್ನು ಬೆಳೆಸದೇ, ದೇಸಿ ಸಂಸ್ಕೃತಿ ಹಾಗೂ ಪರಂಪರೆ ಹೊಂದಿರುವ ಉತ್ಪಾದನಾ ವಸ್ತುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಅಗತ್ಯವಿದೆ ಎಂದರು.

ಕೆಎಸ್‌ಐಸಿಯ ಪಿ.ಎಂ. ಚಂದ್ರಶೇಖರ್ ಮಾತನಾಡಿ, ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬ್ರಿಟಿಷರ ಸಲಹೆ ಮೇರೆಗೆ 1912ರಲ್ಲಿ ರೇಷ್ಮೆ ಕಾರ್ಖಾನೆ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ ಎಂದರು. ಮೈಸೂರು ರೇಷ್ಮೆ ಸೀರೆಗಳಿಗೆ ಉಪಯೋಗಿಸುವ ಜರಿಯು ಪರಿಶುದ್ಧ ಚಿನ್ನದಿಂದ ಕೂಡಿದ್ದು, ಅದರಲ್ಲಿ ಶೇ. 0.65ಚಿನ್ನ ಮತ್ತು ಶೇ. 65ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ಮೇಳದಲ್ಲಿ ಕೆಎಸ್‌ಐಸಿ ಎಲ್ಲ ಉತ್ಪನ್ನಗಳ ಮೇಲೆ ಶೇಕಡ 20 ರಿಯಾಯಿತಿ ನೀಡಲಾಗುವುದು. ಸಾರ್ವಜನಿಕರು ಮೇಳದ ಪ್ರಯೋಜನ ಪಡೆಯಬೇಕು ಎಂದರು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಹಾಜರಿದ್ದರು.   

ಸಮ್ಮೇಳನಕ್ಕೆ ನೋಂದಣಿ

ಬೆಳಗಾವಿಯಲ್ಲಿ ಮಾರ್ಚ್ 11ರಿಂದ 13ರವರೆಗೆ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದ್ದು, ಭಾಗವಹಿಸುವ ಪ್ರತಿನಿಧಿಗಳು ` 50 ಶುಲ್ಕ ಪಾವತಿಸಿ ಫೆ. 21ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ ತಿಳಿಸಿದ್ದಾರೆ. ನೋಂದಣಿ ಮಾಡಿಕೊಂಡಲ್ಲಿ ಊಟ, ವಸತಿ ಸೌಲಭ್ಯ ನೀಡಲಾಗುತ್ತದೆ.
ಸಮ್ಮೇಳನದಲ್ಲಿ ಕನ್ನಡ ಪುಸ್ತಕ ಮೇಳ ಆಯೋಜಿಸಿದ್ದು, ಪ್ರಕಾಶಕರು, ಮಾರಾಟಗಾರರು, ಸಿ.ಡಿ ಮಾರಾಟಗಾರರು ಭಾಗವಹಿಸಬಹುದು. ಆಸಕ್ತರು ಡಿ.ಡಿ.ಯನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಹೆಸರಿಗೆ ತೆಗೆಸಿ ಫೆ. 28ರ ಒಳಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.