ADVERTISEMENT

ಹಿರಿಯೂರು: ಗ್ರಾ.ಪಂ. ಸಿಬ್ಬಂದಿ ಸಮಾವೇಶ: ಸ್ಪಂದಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:45 IST
Last Updated 17 ಅಕ್ಟೋಬರ್ 2012, 9:45 IST

ಹಿರಿಯೂರು: ತಾಲ್ಲೂಕಿನ 32 ಗ್ರಾಮ ಪಂಚಾಯ್ತಿಗಳ ನೌಕರರಿಗೆ ಹೊಸ ವೇತನ ಬಿಡುಗಡೆ ಮಾಡದಿರುವುದು ವಿಷಾದದ ಸಂಗತಿ. ಸಂಬಂಧಿಸಿದ ಅಧಿಕಾರಿ ತಕ್ಷಣ ಹೊಸ ವೇತನ ಬಿಡುಗಡೆ ಮಾಡಬೇಕು ಎಂದು ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ. ಮಲಿಯಪ್ಪ ಒತ್ತಾಯಿಸಿದರು.

ನಗರದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಗ್ರಾಮ ಪಂಚಾಯ್ತಿ ನೌಕರರ ಸಮಾವೇಶದಲ್ಲಿ ಅವರು ಮಾತನಾಡಿದರು.ಬಿಲ್‌ಕಲೆಕ್ಟರ್‌ಗಳು, ನೀರಗಂಟಿಗಳು, ಜಾಡಮಾಲಿಗಳು ಸೇರಿದಂತೆ ಎಲ್ಲರಿಗೂ 13ನೇ ಹಣಕಾಸಿನಲ್ಲಿ ವೇತನ ದೊರೆಯುವಂತೆ ಮಾಡಬೇಕು.
 
ಶಾಸನಬದ್ಧ ಅನುದಾನ ದೊರೆಯುವಂತಾಗಬೇಕು. 2008ರ ನಂತರ ನೇಮಕಗೊಂಡಿರುವ ಎಲ್ಲ ನೌಕರರ ಕಡತ ತರಿಸಿ, ಏಕಕಾಲದಲ್ಲಿ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಜತೆಗೆ ಪಿಂಚಣಿ ಯೋಜನೆ ಅನ್ವಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ರೂ 10 ಸಾವಿರ ವೇತನ ನಿಗದಿಗೊಳಿಸಬೇಕು. ಪಂಚಾಯ್ತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಪಂಚಾಯ್ತಿಯಲ್ಲಿ ಖಾಲಿಯಾಗುವ ಮೇಲಿನ ಹುದ್ದೆಗಳಿಗೆ ಬಡ್ತಿ ನೀಡಬೇಕು. ಹಿಂದಿನ ಮೂರು ವರ್ಷದಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಾ ಬಂದಿದ್ದರೂ ಸರ್ಕಾರ ಗಮನಹರಿಸಿಲ್ಲ. ಸರ್ಕಾರ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದಲ್ಲಿ ರಾಜ್ಯಮಟ್ಟದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಲಿಯಪ್ಪ ಎಚ್ಚರಿಸಿದರು.

ದಾವಣಗೆರೆಯ ಸಿಐಟಿಯು ಕಾರ್ಯದರ್ಶಿ ಕೆ.ಎಲ್. ಭಟ್, ತಾ.ಪಂ. ಇಒ ಅಧಿಕಾರಿ ರಮೇಶ್ ಮಾತನಾಡಿದರು. ತಿಪ್ಪೇಸ್ವಾಮಿ, ಜನಕರಾಜು, ಬೊಮ್ಮಣ್ಣ, ಬಿ.ಕೆ. ಶಿವಣ್ಣ, ನಾಗರಾಜ್(ಜಾನಿ), ವಿಜಯಲಕ್ಷ್ಮೀ, ಪಾಲಮ್ಮ, ರಾಜಮ್ಮ, ಸಂಗೇನಹಳ್ಳಿ ನಿಂಗಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.