ADVERTISEMENT

ಹುಬ್ಬೇರುವಂತೆ ಮಾಡಿದ ವೃದ್ಧರು, ಅಂಗವಿಕಲರು

ಬಹುತೇಕ ಮತಗಟ್ಟೆಗಳಲ್ಲಿ ಉತ್ಸಾಹದಿಂದ ಮತದಾನ

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:49 IST
Last Updated 13 ಮೇ 2018, 11:49 IST
ಚಿತ್ರದುರ್ಗದ ಮತಗಟ್ಟೆಯೊಂದರ ಬಳಿ ಶನಿವಾರ ಮತ ಚಲಾಯಿಸಿ ಆಟೊ ಹತ್ತಲು ಪ್ರಯತ್ನಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ದಿ.ಕೊಳ್ಳೆಪ್ಪ ಅವರ ಪತ್ನಿ ಸಿದ್ದಮ್ಮ ಕಾಣಿಸಿದ್ದು, ಹೀಗೆ.
ಚಿತ್ರದುರ್ಗದ ಮತಗಟ್ಟೆಯೊಂದರ ಬಳಿ ಶನಿವಾರ ಮತ ಚಲಾಯಿಸಿ ಆಟೊ ಹತ್ತಲು ಪ್ರಯತ್ನಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ದಿ.ಕೊಳ್ಳೆಪ್ಪ ಅವರ ಪತ್ನಿ ಸಿದ್ದಮ್ಮ ಕಾಣಿಸಿದ್ದು, ಹೀಗೆ.   

ಚಿತ್ರದುರ್ಗ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಶನಿವಾರ ಶತಾಯುಷಿ, 95 ವಯಸ್ಸು ದಾಟಿದ ವಯೋವೃದ್ಧರು, ಅಂಗವಿಕಲರು ಮತ ಚಲಾಯಿಸಿ ನೋಡುಗರ ಹುಬ್ಬೇರಿಸಿದರು.

ಕೆಲವೆಡೆ ವಿದ್ಯಾವಂತ ಸಮೂಹವೇ ಮತ ಹಾಕಲು ಹಿಂದೇಟು ಹಾಕುವ ಸ್ಥಿತಿ ಇರುವಾಗ ಕುಟುಂಬ ಸದಸ್ಯರ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮತಗಟ್ಟೆ ಬಳಿ ಆಟೊ, ಕಾರುಗಳಿಂದ ಇಳಿಯುವಾಗ, ಹತ್ತುವಾಗ  ಕಷ್ಟ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿನ ಕರುವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ಕೊಳ್ಳೆಪ್ಪ ಅವರ ಪತ್ನಿ ಸಿದ್ದಮ್ಮ (95) ಮತ  ಚಲಾಯಿಸಿದರು.

ADVERTISEMENT

ನಡೆದಾಡಲು ಸಾಧ್ಯವಾಗದ ಜಯಲಕ್ಷ್ಮಿ, ನಾಗರಾಜ್ ಸೇರಿ ಕೆಲ ವಯೋವೃದ್ಧರನ್ನು ಅವರ ಮಕ್ಕಳು ಮತಗಟ್ಟೆಗೆ ವ್ಹೀಲ್ ಚೇರ್ ಸಹಾಯದ ಮೂಲಕ ಕರೆತಂದರು. ಅಂಗವಿಕಲರೂ ಇದಕ್ಕೆ ಹೊರತಾಗಿರಲಿಲ್ಲ. ಚುನಾವಣಾ ಆಯೋಗದಿಂದ ಕಲ್ಪಿಸಿದ್ದ ವ್ಹೀಲ್‌ ಚೇರ್‌ಗಳ ಉಪಯೋಗಕ್ಕೆ ಬಂದವು.

ಅಂಗವಿಕಲರು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಶೇಷ ಅಭಿಯಾನಗಳ ಮೂಲಕ ಸಾಕಷ್ಟು ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಾಗುವಂತೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಿಗೂ  ವ್ಹೀಲ್ ಚೇರ್‌ಗಳ ವ್ಯವಸ್ಥೆ ಕಲ್ಪಿಸಿದ್ದೇವೆ ಎನ್ನುತ್ತಾರೆ ಅಂಗವಿಕರ ಕಲ್ಯಾಣಾಧಿಕಾರಿ ಜೆ. ವೈಶಾಲಿ.

ಹಿರಿಯ ನಾಗರಿಕರು ಮತ್ತು ಅಂಗವಿಕಲರನ್ನು ನೋಡಿಕೊಳ್ಳುವುದಕ್ಕಾಗಿ ಆಶಾ ಕಾರ್ಯಕರ್ತೆಯರನ್ನು ಅಂಗವಿಕಲರ ಸಹಾಯಕರಾಗಿ ನೇಮಕ ಮಾಡಿ ಅನುಕೂಲ ಕಲ್ಪಿಸಿದ್ದೇವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.