ADVERTISEMENT

ಹೊಸದುರ್ಗ: ಸಿಡಿಲಿಗೆ ಐತಿಹಾಸಿಕ ಕೋಟೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 6:00 IST
Last Updated 6 ಅಕ್ಟೋಬರ್ 2017, 6:00 IST

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿ ಲಕ್ಕಿಹಳ್ಳಿಯಲ್ಲಿ ಬುಧವಾರ ಸಂಜೆ ಬಡಿದ ಸಿಡಿಲಿಗೆ ಇಲ್ಲಿನ ಮದಕರಿ ನಾಯಕನ ಕಾಲದ ಐತಿಹಾಸಿಕ ಕೋಟೆಗೆ ಹಾನಿಯಾಗಿದೆ. ಸಿಡಿಲಿನ ಬಡಿತಕ್ಕೆ ಕೋಟೆಯ ಮೇಲ್ಭಾಗದಲ್ಲಿ ಕಲ್ಲುಗಳು ಸಿಡಿದ್ದರಿಂದ ಗ್ರಾಮದ ಮುದ್ದಪ್ಪ ಎಂಬುವವರು ಗಾಯಗೊಂಡಿದ್ದಾರೆ. ಉಳಿದಂತೆ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದ್ದರಿಂದ ಕೋಟೆ ಸಮೀಪದಲ್ಲಿ ಇರುವ ಮನೆಯ ಜನರು ಮನೆಯೊಳಗೆ ಇರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಇರುವ ಪ್ರಯುಕ್ತ ಗ್ರಾಮಸ್ಥರೆಲ್ಲಾ ಸೇರಿ ಹಾನಿಯಾಗಿದ್ದ ಕೋಟೆ ಮೇಲ್ಭಾಗದ ಕಲ್ಲುಗಳನ್ನು ಸರಿಪಡಿಸಿದರು. ಬಳಿಕ ಹೊಸ ಬಣ್ಣ ಬಳಿದು ಜಯಂತ್ಯುತ್ಸವ ಆಚರಿಸಿದರು ಎಂದು ಮುದ್ದಲಿಂಗಪ್ಪ ತಿಳಿಸಿದರು.

5 ಮನೆಗೆ ಹಾನಿ: ತಾಲ್ಲೂಕಿನ ಮತ್ತೋಡು ಹೋಬಳಿಯ ನಾಗನಾಯ್ಕನಕಟ್ಟೆಯ ಗೌರಿಬಾಯಿ ಹರಿಶ್ಚಂದ್ರನಾಯ್ಕ, ಕಲೀನಾಯ್ಕ, ದುರ್ಗಾನಾಯ್ಕ ಹಾಗೂ ದೊಡ್ಡಯ್ಯನಪಾಳ್ಯದ ಮೇಣಪ್ಪ, ತಿಪ್ಪಣ್ಣ ಅವರಿಗೆ ಸೇರಿದ ಒಟ್ಟ್ಟು ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬುಧವಾರ ಸಂಜೆ ತಾಲ್ಲೂಕಿನಲ್ಲೆಡೆ 82.4 ಮಿ.ಮೀ ಮಳೆಯಾಗಿದೆ ಎಂದು ತಾಲ್ಲೂಕು ಆಡಳಿತದ ಮಳೆ ಮಾಪನ ವಿಭಾಗ ತಿಳಿಸಿದೆ.

ADVERTISEMENT

ತುಂಬಿದ ಚೆಕ್‌ ಡ್ಯಾಂ: ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಮಾಡದಕೆರೆ ಹೋಬಳಿ ಅತ್ತಿಮಗ್ಗೆ ಸಮೀಪ ಕಳೆದ ವರ್ಷ ವಿಶ್ವೇಶ್ವರಯ್ಯ ಜಲನಿಗಮ ಯೋಜನೆಯಡಿ ₨ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಚೆಕ್‌ ಡ್ಯಾಂ ಭರ್ತಿಯಾಗಿದೆ. ಇದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ಕೋಡಿ ಬಿದ್ದಿರುವ ಚೆಕ್‌ ಡ್ಯಾಂನಲ್ಲಿ ಬರುತ್ತಿರುವ ಮೀನುಗಳನ್ನು ಬೇಟೆಗಾರರು ಬಲೆ ಬಳಸಿ ಹಿಡಿಯುತ್ತಿದ್ದಾರೆ ಎಂದು ಗುತ್ತಿಗೆದಾರ ನಾಗೇನಹಳ್ಳಿ ನಿರಂಜನಮೂರ್ತಿ ಹಾಗೂ ಮಂಜುನಾಥ್‌ ತಿಳಿಸಿದರು.

ಪಟ್ಟಣ ಸೇರಿದಂತೆ ಮಾಡದಕೆರೆ, ಮತ್ತೋಡು ಇನ್ನಿತರ ಕಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಒಂದು ತಾಸಿಗೂ ಹೆಚ್ಚು ಹೊತ್ತು ಬಿರುಸಿನಿಂದ ಮಳೆ ಸುರಿಯಿತು. ವಿದ್ಯುತ್‌ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತವಾಯಿತು. ಪಟ್ಟಣದಲ್ಲಿ ದುರಸ್ತಿಯಾಗದ ರಸ್ತೆಗಳಲ್ಲಿ ಕೊರಕಲು ಬಿದ್ದು ಸಾಕಷ್ಟು ನೀರು ನಿಲ್ಲುವಂತಾಯಿತು. ಸಾಕಷ್ಟು ದಿನದಿಂದ ಪಟ್ಟಣದಲ್ಲಿ ಕಟ್ಟಿಕೊಂಡಿದ್ದ ಚರಂಡಿಗಳು ಸ್ವಚ್ಛವಾದವು ಎನ್ನುತ್ತಾರೆ ಎ.ಎನ್‌.ಅಡಿಟರ್‌ ಮಲ್ಲೇಶಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.