ADVERTISEMENT

1ರಿಂದ 5ನೇ ತರಗತಿ ಕಾರ್ಯಾರಂಭ: ಶಾಲಾ ಮಕ್ಕಳಿಗೆ ಆತ್ಮೀಯ ಸ್ವಾಗತ, ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 11:03 IST
Last Updated 25 ಅಕ್ಟೋಬರ್ 2021, 11:03 IST
ಚಿತ್ರದುರ್ಗದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲೆಗೆ ಬಂದ ಮಕ್ಕಳಿಗೆ ಕೋವಿಡ್‌ ಮಾರ್ಗಸೂಚಿಯ ಬಗ್ಗೆ ತಿಳಿವಳಿಕೆ ನೀಡಲಾಯಿತು.
ಚಿತ್ರದುರ್ಗದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲೆಗೆ ಬಂದ ಮಕ್ಕಳಿಗೆ ಕೋವಿಡ್‌ ಮಾರ್ಗಸೂಚಿಯ ಬಗ್ಗೆ ತಿಳಿವಳಿಕೆ ನೀಡಲಾಯಿತು.   

ಚಿತ್ರದುರ್ಗ: ಒಂದೂವರೆ ವರ್ಷದ ಬಳಿಕ ವಿದ್ಯಾರ್ಥಿಗಳು ಸೋಮವಾರ ಶಾಲೆಯ ಮೆಟ್ಟಿಲು ತುಳಿದರು. 1ರಿಂದ 5ನೇ ತರಗತಿಗೂ ಆಫ್‌ಲೈನ್‌ ಬೋಧನೆ ಆರಂಭವಾಗಿದ್ದು, ಮಕ್ಕಳು ಹರ್ಷದಿಂದಲೇ ಶಾಲೆಗೆ ಆಗಮಿಸಿದರು. ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿದರು.

ಚಿಣ್ಣರ ಆಗಮನದಿಂದ ಶಾಲೆ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಗೊಂಡಿದೆ. ಶಿಕ್ಷಣ ವ್ಯವಸ್ಥೆ ಮೊದಲ ಸ್ಥಿತಿಗೆ ಮರಳುವ ಆಶಾಭಾವನೆ ಮೂಡಿಸಿದೆ. ಸರ್ಕಾರದ ಸೂಚನೆಯ ಮೇರೆಗೆ ಅ.30ರವರೆಗೆ ಮಕ್ಕಳು ದಿನಬಿಟ್ಟು ದಿನ ಶಾಲೆಗೆ ಹಾಜರಾಗಲಿದ್ದಾರೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳೂ ಸೇರಿ ಜಿಲ್ಲೆಯಲ್ಲಿ 861 ಕಿರಿಯ ಪ್ರಾಥಮಿಕ ಶಾಲೆ, 1,065 ಹಿರಿಯ ಪ್ರಾಥಮಿಕ ಶಾಲೆ ಹಾಗೂ 486 ಪ್ರೌಢಶಾಲೆಗಳಿವೆ. 1ರಿಂದ 5ನೇ ತರಗತಿಯ 1.25 ಲಕ್ಷ ಮಕ್ಕಳು ಜಿಲ್ಲೆಯಲ್ಲಿದ್ದಾರೆ. 6ರಿಂದ 10ನೇ ತರಗತಿಯ 1.3 ಲಕ್ಷ ಮಕ್ಕಳು ಈಗಾಗಲೇ ಶಾಲೆಗೆ ಹಾಜರಾಗುತ್ತಿದ್ದಾರೆ.

ADVERTISEMENT

ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಭಾನುವಾರದಿಂದಲೇ ಸಜ್ಜಾಗಿದ್ದವು. ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಕೊಠಡಿಗಳಲ್ಲಿ ಬಲೂನ್‌ಗಳು ಹಾರಾಡುತ್ತಿದ್ದವು. ಮಕ್ಕಳಿಗೆ ಹೂ, ಚಾಕೊಲೇಟ್‌ ನೀಡಿ ಬರಮಾಡಿಕೊಳ್ಳಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ನಿಗದಿತ ಸಮಯಕ್ಕೆ ಶಾಲೆಗೆ ಆಗಮಿಸಿದ ಮಕ್ಕಳು ಅಂತರ ಕಾಯ್ದುಕೊಳ್ಳಲು ಅಂಗಳದಲ್ಲಿ ಮಾರ್ಕಿಂಗ್‌ ಮಾಡಲಾಗಿತ್ತು. ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಪ್ರತಿಯೊಬ್ಬರ ದೇಹದ ಉಷ್ಣಾಂಶವನ್ನು ಪರೀಕ್ಷಿಸಿದ ಶಾಲಾ ಸಿಬ್ಬಂದಿ, ಸ್ಯಾನಿಟೈಸರ್‌ ನೀಡಿ ಕೈಗಳನ್ನು ಶುಚಿಗೊಳಿಸಿಕೊಳ್ಳುವಂತೆ ಸೂಚನೆ ನೀಡಿದರು. ಬಳಿಕ ಮಕ್ಕಳು ತರಗತಿಗೆ ತೆರಳಲು ಹೇಳಲಾಯಿತು.

ಕೆಮ್ಮು, ಶೀತ, ಜ್ವರದಂತಹ ಅನಾರೋಗ್ಯದಿಂದ ಬಳಲುವ ಮಕ್ಕಳು ಶಾಲೆಗೆ ಬಾರದಂತೆ ಮೊದಲೇ ತಿಳಿಸಲಾಗಿತ್ತು. ರೋಗಲಕ್ಷಣ ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಅ.30ರವರೆಗೆ ಅರ್ಧದಿನ ಮಾತ್ರ ತರಗತಿಗಳು ನಡೆಯಲಿವೆ. ನ.2ರಿಂದ ಪೂರ್ಣದಿನ ಶಾಲೆ ಕಾರ್ಯಾರಂಭವಾಗಲಿದೆ. ಈ ವೇಳೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ 2020ರ ಮಾರ್ಚ್‌ ತಿಂಗಳಿಂದ ಶಾಲೆಗಳು ಬಾಗಿಲು ಮುಚ್ಚಿದ್ದವು. ಸೋಂಕು ಕಡಿಮೆಯಾದರೂ 1ರಿಂದ 5ನೇ ತರಗತಿಯ ಮಕ್ಕಳಿಗೆ ಮಾತ್ರ ಶಾಲೆ ಆರಂಭವಾಗಿರಲಿಲ್ಲ. ಆನ್‌ಲೈನ್‌ ಮೂಲಕವೇ ಪಾಠ ಕೇಳುತ್ತಿದ್ದ ಮಕ್ಕಳು ಒಂದೂವರೆ ವರ್ಷದ ಬಳಿಕ ಶಾಲೆಗೆ ಬಂದರು. ಹಾಜರಾತಿ ಕಡ್ಡಾಯ ಮಾಡದಿರುವುದರಿಂದ 1 ಹಾಗೂ 2ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಶಾಲೆಗೆ ಬಾರದ ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ನೀಡಿ ಕಲಿಕೆಯಲ್ಲಿ ತೊಡಗಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಹಳ್ಳಿಯಲ್ಲಿ ಕಾಣದ ಸಂಭ್ರಮ

ಚಿತ್ರದುರ್ಗ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಆರಂಭಿಸಿ ಹಲವು ದಿನಗಳೇ ಕಳೆದಿವೆ. ಹೀಗಾಗಿ ಸೋಮವಾರ ವಿಶೇಷ ಸಂಭ್ರಮವೇನೂ ಕಂಡುಬರಲಿಲ್ಲ.

ಕೊರೊನಾ ಸೋಂಕು ಕಡಿಮೆಯಾದ ಬಳಿಕ 6ರಿಂದ 10ನೇ ತರಗತಿ ಶುರುವಾದವು. ಇದಾದ ಕೆಲ ದಿನಗಳಲ್ಲೇ ಬಹುತೇಕ ಗ್ರಾಮಸ್ಥರು ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸತೊಡಗಿದರು. ಹಲವು ಗ್ರಾಮಗಳಲ್ಲಿ 1ನೇ ತರಗತಿಯಿಂದಲೇ ಶಾಲೆಗಳು ಪ್ರಾರಂಭವಾಗಿದ್ದವು.

‘ಶಾಲೆ ಇಲ್ಲದಿರುವುದರಿಂದ ಮಕ್ಕಳನ್ನು ಸಂಬಾಳಿಸುವುದು ಪೋಷಕರಿಗೆ ಕಷ್ಟವಾಗಿತ್ತು. ಚಿಕ್ಕ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೇ ಅನೇಕರು ಶಾಲೆಗೆ ಕರೆತಂದು ಬಿಡುತ್ತಿದ್ದರು. ನಾವೂ ಬೋಧನೆ ಮಾಡುತ್ತಿದ್ದೆವು. ಸೋಮವಾರ ಶಾಲೆ ಪ್ರಾರಂಭವಾಗಿದ್ದರಲ್ಲಿ ವಿಶೇಷವೇನೂ ಕಾಣುತ್ತಿಲ್ಲ’ ಎಂದು ಚಿತ್ರದುರ್ಗ ತಾಲ್ಲೂಕಿನ ಗ್ರಾಮವೊಂದರ ಶಿಕ್ಷಕರು ಮಾಹಿತಿ ಹಂಚಿಕೊಂಡರು.

ರಾಷ್ಟ್ರಗೀತೆ, ನಾಡಗೀತೆ ಮರೆತರು

ಇಷ್ಟು ದಿನ ಶಾಲೆ ಇಲ್ಲದ ಪರಿಣಾಮ ಬಹುತೇಕ ಮಕ್ಕಳು ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನೇ ಮರೆತುಬಿಟ್ಟಿದ್ದಾರೆ. ಸೋಮವಾರ ಮಧ್ಯಾಹ್ನದವರೆಗೆ ಮಕ್ಕಳಿಗೆ ನಾಡಗೀತೆ ಮತ್ತು ರಾಷ್ಟ್ರಗೀತೆ ಕಲಿಸಲು ಒತ್ತು ನೀಡಲಾಯಿತು.

ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳಿಗ್ಗೆ ನಿಗದಿಯಂತೆ ಮಕ್ಕಳು ಹಾಜರಾದರು. ಶಾಲೆಯ ಆವರಣದಲ್ಲಿ ಮಕ್ಕಳು ಶಿಸ್ತಿನಿಂದ ನಿಂತರು. ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸಿದ ಶಿಕ್ಷಕರು, ಅನುಸರಿಸಬೇಕಾದ ಎಚ್ಚರಿಕೆಯ ಬಗ್ಗೆ ತಿಳಿವಳಿಕೆ ನೀಡಿದರು. ಈ ವೇಳೆ ನಾಡಗೀತೆ ಹೇಳುವಂತೆ ಸೂಚನೆ ನೀಡಿದರು.

ಆದರೆ, ಯಾವೊಬ್ಬ ವಿದ್ಯಾರ್ಥಿಯೂ ನಾಡಗೀತೆಯನ್ನು ಸ್ಪಷ್ಟವಾಗಿ ಹೇಳಲಿಲ್ಲ. ಇದನ್ನು ಅರಿತ ಶಿಕ್ಷಕಿಯರು ನಾಡಗೀತೆ ಕಲಿಯುವಂತೆ ಎಲ್ಲರಿಗೂ ಸೂಚನೆ ನೀಡಿದರು. ಹಿರಿಯ ವಿದ್ಯಾರ್ಥಿಗಳು ಮಾತ್ರ ರಾಷ್ಟ್ರಗೀತೆ ಹಾಡಿದರು. ಬಳಿಕ ತರಗತಿಗಳತ್ತ ಮುಖ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.