ಸಿರಿಗೆರೆ: ತರಳಬಾಳು ಪೀಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿರಿಗೆರೆ ಸಜ್ಜುಗೊಂಡಿದೆ.
ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದು, ಈ ಬಾರಿಯ ಆಚರಣೆಯನ್ನು ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ.
ಬಿ.ಎಲ್.ಆರ್. ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕಾಗಿ ಮಹಾಮಂಟಪ ನಿರ್ಮಿಸಲಾಗಿದೆ. 5000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಂಟಪದ ತುಂಬೆಲ್ಲಾ ವಿದ್ಯುತ್ ದೀಪಾಲಂಕಾರ, ಶರಣರು ಮತ್ತು ಶ್ರೀಗಳ ನುಡಿಗಳುಳ್ಳ ಫ್ಲೆಕ್ಸ್ ಅಳವಡಿಸಲಾಗಿದೆ. ಮಂಟಪದಿಂದ ಹೊರಗೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ತರಳಬಾಳು ಸಂಸ್ಥೆಯ ಶಾಲಾ ಕಾಲೇಜುಗಳು, ಹಾಸ್ಟೆಲ್‌ಗಳು, ಆಡಳಿತ ಕಚೇರಿ, ಮಠದ ಆವರಣ, ಐಕ್ಯಮಂಟಪ ಹಾಗೂ ಸಿರಿಗೆರೆಯ ಪ್ರಮುಖ ಬೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಸಮಾರಂಭಕ್ಕೆ ಆಗಮಿಸುವ ಭಕ್ತರಿಗೆ ಮಹಾಮಂಟಪದ ಸಮೀಪ ನಿರ್ಮಾಣ ಮಾಡಲಾಗಿರುವ ದಾಸೋಹ ಮಂಟಪದಲ್ಲಿ ಊಟೋಪಚಾರಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಬಫೆ ಮತ್ತು ಕುಳಿತು ಊಟ ಮಾಡುವ ಸೌಲಭ್ಯವಿದೆ. ದಾಸೋಹಕ್ಕೆ ನೆರವಾಗಲು ಈಗಾಗಲೇ ಹಲವು ಕಡೆಯಿಂದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ರವೆ, ಕಡ್ಲೇಕಾಳು ಹಾಗೂ ವಿವಿಧ ತರಕಾರಿಗಳು ಬಂದಿವೆ. ದೂರದ ಮಹಾಲಿಂಗಪುರದಿಂದ ಬೆಲ್ಲ ಬಂದಿದೆ. ಚನ್ನಗಿರಿಯ ತುಮ್ಕೋಸ್ ಸಂಸ್ಥೆಯವರು ಎಂದಿನಂತೆ ಲಾಡು ಉಂಡೆಗಳನ್ನು ಸಿದ್ಧಗೊಳಿಸುತ್ತಿದ್ದಾರೆ.
ಬೆಳಿಗ್ಗೆ 11: ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತರಳಬಾಳು ವಿದ್ಯಾಸಂಸ್ಥೆಯ ಆಶ್ರಿತ ಶಾಲಾ ಕಾಲೇಜುಗಳಿಗೆ ಅಭಿನಂದನೆ. ಮುಖ್ಯ ಅತಿಥಿಗಳು: ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಸ್.ಆಕಾಶ್, ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ಕೆ. ತಿಮ್ಮಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ.
ಸಂಜೆ 6: ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ ಆಶೀರ್ವಚನ. ಅತಿಥಿಗಳು: ಸಂಸದ ಗೋವಿಂದ ಕಾರಜೋಳ, ಶಾಸಕರಾದ ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಶಿವಮೊಗ್ಗ ಕೃಷಿ ವಿವಿ ಕುಲಪತಿ ಆರ್.ಸಿ. ಜಗದೀಶ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಸಿ. ಕೋಮಲ, ಚಿತ್ರನಟ ಶ್ರೀಧರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.