
ಹಿರಿಯೂರು: ‘ಗುಬ್ಬಿ ಕಂಪನಿಯವರು ಹಿರಿಯೂರಿನಲ್ಲಿ ಪ್ರದರ್ಶಿಸಿದ ನಾಟಕಗಳು ಅದ್ಭುತ ಯಶಸ್ಸು ಕಂಡಿದ್ದವು. ಇಂದಿಗೂ ಈ ಭಾಗದಲ್ಲಿ ರಂಗಾಸಕ್ತರ ಸಂಖ್ಯೆ ಕಡಿಮೆಯಾಗಿಲ್ಲ’ ಎಂದು ಚಿತ್ರನಟ ಶರಣ್ ಹೇಳಿದರು.
ನಗರದ ಗಂಗಾ ಸಮೂಹ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 20ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ನಾಟಕಗಳ ವಿಚಾರ ಬಂದಾಗ ಗುಬ್ಬಿ ಕಂಪನಿಗೆ ಇತಿಹಾಸವಿದೆ. 60–70ರ ದಶಕದ ಘಟಾನುಘಟಿ ನಾಯಕರು ಗುಬ್ಬಿ ಕಂಪನಿಯ ಮೂಲಕ ಜಗತ್ತಿಗೆ ಪರಿಚಯವಾದವರು. ನಮ್ಮ ತಂದೆ ಗುಬ್ಬಿ ನಾಟಕ ಕಂಪನಿಯನ್ನು ಹಿರಿಯೂರಿಗೆ ತಂದು ಹಲವು ಬಾರಿ ನಾಟಕಗಳನ್ನು ಪ್ರದರ್ಶಿಸಿದ್ದರು. ಪ್ರತಿ ನಾಟಕಕ್ಕೂ ಇಲ್ಲಿನ ರಂಗಾಸಕ್ತರು ಮನದುಂಬಿ ಪ್ರೋತ್ಸಾಹ ನೀಡಿದ್ದನ್ನು ನಮ್ಮ ತಂದೆ ಸದಾ ಸ್ಮರಿಸುತ್ತಿದ್ದರು’ ಎಂದರು.
‘ಜನಪದ ಹಾಗೂ ರಂಗಭೂಮಿಗೆ ಈ ಭಾಗದ ಕಲಾವಿದರ ಕೊಡುಗೆ ಅಪಾರ. ಹೀಗಾಗಿ ಗಂಗಾ ಶಿಕ್ಷಣ ಸಂಸ್ಥೆಯವರು ನನ್ನನ್ನು ಆಹ್ವಾನಿಸಿದಾಗ ಸಂತೋಷದಿಂದ ಒಪ್ಪಿ ಬಂದಿದ್ದೇನೆ. ನಿವೃತ್ತಿಯ ನಂತರ ಓಬಯ್ಯನವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಿಸಿರುವ ಶಾಲೆ ಮಕ್ಕಳ ಪಾಲಿಗೆ ಜ್ಞಾನ ದೀವಿಗೆಯಾಗಿ ಬೆಳಗಲಿ’ ಎಂದು ಅವರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥ ಓಬಯ್ಯ, ಹಿರಿಯೂರು ಉಪವಿಭಾಗದ ಡಿವೈಎಸ್ಪಿ ಶಿವಕುಮಾರ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಸಿದ್ದಗಂಗಮ್ಮ, ಡಾ. ಮನು, ಸದಸ್ಯರಾದ ಲಕ್ಷ್ಮಿ ಪ್ರಶಾಂತ್, ಪ್ರಾಂಶುಪಾಲರು ಆಡಳಿತಾಧಿಕಾರಿ, ಬೋಧಕ–ಬೋಧಕೇತರರು, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.