ADVERTISEMENT

ಚಿತ್ರದುರ್ಗ: ಭರವಸೆ ಮೂಡಿಸಿದ ಪುಷ್ಪ ಕೃಷಿ

ಲಾಕ್‌ಡೌನ್‌ ಬಳಿಕ ಚೇತರಿಸಿಕೊಂಡ ಹೂ ಬೆಳೆಗಾರರು

ಜಿ.ಬಿ.ನಾಗರಾಜ್
Published 30 ಸೆಪ್ಟೆಂಬರ್ 2020, 19:30 IST
Last Updated 30 ಸೆಪ್ಟೆಂಬರ್ 2020, 19:30 IST
ಕಟಾವಿಗೆ ಸಜ್ಜಾದ ಸೇವಂತಿ ಹೂ
ಕಟಾವಿಗೆ ಸಜ್ಜಾದ ಸೇವಂತಿ ಹೂ   

ಚಿತ್ರದುರ್ಗ: ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟ ಎದುರಿಸಿ ಸರ್ಕಾರದ ಪರಿಹಾರಕ್ಕೆ ಮೊರೆಯಿಟ್ಟಿದ್ದ ಹೂ ಬೆಳೆಗಾರರನ್ನು ಪುಷ್ಪ ಕೃಷಿ ಮರಳಿ ಕೈಹಿಡಿಯುತ್ತಿದೆ. ಮಾರುಕಟ್ಟೆಯಲ್ಲಿ ಹೂಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಲೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಇದು ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ಜಿಲ್ಲೆಯಲ್ಲಿ 2,223 ಹೆಕ್ಟೇರ್‌ ಪ್ರದೇಶದಲ್ಲಿ ಹೂ ಬೆಳೆಗಳನ್ನು ಬೆಳೆಯಲಾಗಿದೆ. ಈಚೆಗೆ ಸುರಿದ ಧಾರಾಕಾರ ಮಳೆ ಹೂ ಬೆಳೆಗೂ ಹಾನಿಯುಂಟು ಮಾಡಿದೆ. ಮತ್ತೆ ಸಂಕಷ್ಟಕ್ಕೆ ಸಿಲುಕಿದ ಆತಂಕ ಎದುರಾದ ಬೆನ್ನಲ್ಲೇ ಪುಷ್ಪಕ್ಕೆ ಬೇಡಿಕೆ ಬಂದಿದೆ. ಇನ್ನಷ್ಟೇ ಸಾಲು ಹಬ್ಬಗಳು ಆರಂಭವಾಗುವುದರಿಂದ ಹೂ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.

ಜಿಲ್ಲೆಯ ಹೂ ಬೆಳೆಗಳಲ್ಲಿ ಸೇವಂತಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಲವು ವರ್ಷಗಳಿಂದ ನಿರಂತರವಾಗಿ ಸೇವಂತಿ ಬೆಳೆಯುವ ಕೃಷಿಕರೂ ಇಲ್ಲಿದ್ದಾರೆ. ಹಬ್ಬ, ಶುಭ ಸಮಾರಂಭ ನಡೆಯುವ ಕಾಲವನ್ನು ಗಮನಿಸಿ ಹೂ ಬೆಳೆಯುತ್ತಾರೆ. ಈ ಬಾರಿ ಅಧಿಕ ಮಾಸ ಬಂದಿದ್ದರಿಂದ ದಸರಾ ಮಹೋತ್ಸವ ಒಂದು ತಿಂಗಳು ಮುಂದೆ ಹೋಗಿದೆ. ಆದರೂ, ಹೂ ಬೆಳೆಗಾರರು ಲಾಭದತ್ತ ಮುಖ ಮಾಡಿದ್ದಾರೆ.

ADVERTISEMENT

ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಹೂ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ, ಹುಣಸೆಕಟ್ಟೆ ಸೇರಿ ಹಲವು ಗ್ರಾಮಗಳಲ್ಲಿ ಪುಷ್ಪಕೃಷಿಯನ್ನು ಬಹುಬೆಳೆ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಈ ಎಲ್ಲ ಹೂ ಬೆಳೆಗಾರರು ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಯುಗಾದಿ ಹಬ್ಬಕ್ಕೂ ಮೊದಲೇ ಲಾಕ್‌ಡೌನ್‌ ಘೋಷಣೆ ಆಗಿದ್ದರಿಂದ ಮಾರುಕಟ್ಟೆ ಸಿಕ್ಕಿರಲಿಲ್ಲ. ಆದರೂ, ಪುಷ್ಪ ಕೃಷಿಯಿಂದ ವಿಮುಖರಾಗಲಿಲ್ಲ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಹೂ ಬೆಳೆದು ₹ 1 ಲಕ್ಷ ನಷ್ಟ ಅನುಭವಿಸಿದೆ. ಪುಷ್ಪ ಕೃಷಿಯ ಬಗ್ಗೆಯೇ ಬೇಸರ ಮೂಡಿತ್ತು. ಮೇ ತಿಂಗಳಲ್ಲಿ ಸೇವಂತಿ, ಚಂಡು ಹೂ, ಕನಕಾಂಬರ ಸಸಿ ಹಾಕಿದೆ. ಸೆಪ್ಟೆಂಬರ್‌ ಮೊದಲ ವಾರದಿಂದ ಹೂ ಸಿಗುತ್ತಿದೆ. ಉತ್ತಮ ಲಾಭದ ನಿರೀಕ್ಷೆ ಹುಟ್ಟಿದೆ’ ಎನ್ನುತ್ತಾರೆ ತುರುವನೂರು ಹೋಬಳಿಯ ಹುಣಸೆಕಟ್ಟೆ ರೈತ ಪಿ.ಜಿ.ಶ್ರೀನಿವಾಸ್‌.

ಏಳು ಎಕರೆ ಜಮೀನು ಹೊಂದಿರುವ ಶ್ರೀನಿವಾಸ್‌ ಎರಡು ಎಕರೆಯಲ್ಲಿ ಸೇವಂತಿ ಬೆಳೆದಿದ್ದಾರೆ. ಸೆಂತಿಲ್‌, ರೂಬಿ, ಕಾವೇರಿ, ಪೂರ್ಣಿಮಾ, ಪಚ್ಚೆ ಸೇವಂತಿ ಜಮೀನಿನಲ್ಲಿ ಅರಳಿವೆ. ನಿತ್ಯ ಸಾರಾಸರಿ ಮೂರು ಕ್ವಿಂಟಲ್‌ ಹೂ ಕೀಳುತ್ತಿದ್ದಾರೆ. ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಹಾಗೂ ಮಂಗಳೂರು ಮಾರುಕಟ್ಟೆಗೆ ಹೂ ಸರಬರಾಜು ಮಾಡುತ್ತಿದ್ದಾರೆ.

‘ಕಳೆದ ವಾರ 12 ಮಾರು ಹೂಗೆ ಸಾವಿರ ಬೆಲೆ ಸಿಕ್ಕಿತ್ತು. ಎರಡು ದಿನಗಳಿಂದ ಬೆಲೆ ಕೊಂಚ ಕಡಿಮೆಯಾಗಿದೆ. ಅಮವಾಸ್ಯೆ ಬಳಿಕ ಮತ್ತೆ ಹೂ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ದಸರಾ ಹಬ್ಬಕ್ಕೆ ಉತ್ತಮ ಲಾಭ ಸಿಗಲಿದೆ’ ಎಂಬ ಲೆಕ್ಕಚಾರ ಮುಂದಿಡುತ್ತಾರೆ ಶ್ರೀನಿವಾಸ್‌.

ಹೂವಿನ ಬೆಳೆಗಳ ವಿಸ್ತೀರ್ಣ

ಬೆಳೆಗಳು-ವಿಸ್ತೀರ್ಣ (ಹೆಕ್ಟೇರ್‌)

ಸೇವಂತಿ-1,059

ಸುಗಂಧರಾಜ-562

ಚಂಡುಹೂ-207

ಮಲ್ಲಿಗೆ-155

ಕನಕಾಂಬರ-121

ಗುಲಾಬಿ-48

ಆಸ್ಟರ್‌-38

ಇತರೆ-27

ಒಟ್ಟು- 2,223

**************

20 ವರ್ಷದಿಂದ ಹೂ ಬೆಳೆಯುತ್ತಿದ್ದೇನೆ. ಮಡಿ ಪದ್ಧತಿಯಲ್ಲಿ ಇಳುವರಿ ಸಿಗುತ್ತಿರಲಿಲ್ಲ. ಹೀಗಾಗಿ, ನಷ್ಟ ಅನುಭವಿಸಿದ್ದೇ ಹೆಚ್ಚು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡ ಬಳಿಕ ಲಾಭದಾಯಕವಾಗಿದೆ.
ಪಿ.ಜಿ.ಶ್ರೀನಿವಾಸ್‌
ಹೂ ಬೆಳೆಗಾರ, ಹುಣಸೆಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.