ಚಿತ್ರದುರ್ಗ: ರಾಜ್ಯದ ಮೊಟ್ಟಮೊದಲ ಫ್ರಿಕ್ವೆನ್ಸಿ ಮೋಡ್ (ಎಫ್‌ಎಂ) ಕೇಂದ್ರವಾಗಿ ಸ್ಥಾಪನೆಯಾದ ‘ಚಿತ್ರದುರ್ಗ ಆಕಾಶವಾಣಿ’ ಕೇಂದ್ರ 35ನೇ ವರ್ಷಕ್ಕೆ ಕಾಲಿರಿಸಿದೆ. ಸ್ಥಳೀಯ ಸಂಸ್ಕೃತಿಗೆ ಅದರಲ್ಲೂ ಕೋಟೆನಾಡಿಗೆ ಕಳಶಪ್ರಾಯವಾಗಿರುವ ಬುಡಕಟ್ಟು ಸಂಸ್ಕೃತಿ ಮೇಲೆ ಬೆಳಕು ಹರಿಸುವ ಕೆಲಸ ಮಾಡಿರುವ ಬಾನುಲಿ ಕೇಂದ್ರ ದುರ್ಗದ ಜನರ ಹೃದಯದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಮಧ್ಯಕರ್ನಾಟಕ ಭಾಗದ ಕೇಂದ್ರ ಬಿಂದುವಾಗಿರುವ ಐತಿಹಾಸಿಕ ಚಿತ್ರದುರ್ಗದಲ್ಲಿ 1991ರ ಮೇ 3ರಂದು ಆಕಾಶವಾಣಿ ಕೇಂದ್ರ ತನ್ನ ಪ್ರಸಾರ ಕಾರ್ಯ ಆರಂಭಿಸಿತು. ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಕೇಳಿ ಬರುತ್ತಿದ್ದ ಆಕಾಶವಾಣಿ ಧ್ವನಿ ಸ್ಥಳೀಯ ಜನ ಸಂಸ್ಕೃತಿಯ ಜೀವನಾಡಿಯಂತೆ ಕೆಲಸ ಮಾಡಿದೆ. ಸ್ಥಳೀಯ ಪ್ರತಿಭೆಗಳ ಧ್ವನಿಗೆ ಜೀವ ತುಂಬಿರುವ ಈ ಕೇಂದ್ರ ಮೂರು ದಶಕಗಳಿಂದಲೂ ರಾಜ್ಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದೆ.
ಜಾಲತಾಣಗಳ ಯುಗದಲ್ಲಿ ಈಗ ಚಿತ್ರದುರ್ಗ ಆಕಾಶವಾಣಿ ಕೇಂದ್ರ ವಿಶ್ವಮಾನ್ಯವಾಗಿಯೂ ಮೊಳಗುತ್ತಿದೆ. ‘ನ್ಯೂಸ್ ಆನ್ ಎಐಆರ್’ ಆ್ಯಪ್ ಮೂಲಕ ವಿಶ್ವದೆಲ್ಲೆಡೆ ಇರುವ ದುರ್ಗದ ಜನರು, ದುರ್ಗದ ಪ್ರೇಮಿಗಳು ಈ ಕೇಂದ್ರದ ಕಾರ್ಯಕ್ರಮಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡಿಟಿಎಚ್, ಲೈವ್ ಸ್ಟ್ರೀಮ್ ಮೂಲಕವೂ ಆಕಾಶವಾಣಿ ಕಾರ್ಯಕ್ರಮಗಳು ವಿಶ್ವಮಾನ್ಯವಾಗಿವೆ.
ಆರಂಭದಿಂದಲೂ ಸಹಾಯಕ ನಿಲಯ ನಿರ್ದೇಶಕರು (ಎಎಸ್‌ಡಿ) ಕೇಂದ್ರವನ್ನು ಮುನ್ನಡೆಸಿದ್ದಾರೆ. ಖ್ಯಾತನಾಮ ಎಎಸ್‌ಡಿಗಳು, ಕಾರ್ಯಕ್ರಮ ನಿರ್ವಾಹಕರು, ಪ್ರಸಾರ ಕಾರ್ಯ ನಿರ್ವಾಹಕರು ಸ್ಥಳೀಯ ಸಂಸ್ಕೃತಿಯ ಭಾಗವಾಗಿ ಕೆಲಸ ಮಾಡಿದ್ದಾರೆ. ವಿವಿಧ ರೂಪಕ, ಬಾನುಲಿ ನಾಟಕ, ಜಾನಪದ ಸರಣಿ, ಸಾಹಿತ್ಯ ಸಂಗಮ, ಆರೋಗ್ಯ ಜಾಗೃತಿ, ಶಿಕ್ಷಣ, ರೈತ ಜಾಗೃತಿ ಕಾರ್ಯಕ್ರಮ ರೂಪಿಸುವ ಮೂಲಕ ಸ್ಥಳೀಯರ ಮನಸೂರೆಗೊಂಡಿದ್ದಾರೆ.
ಹಲೋ ಡಾಕ್ಟರ್, ಜ್ಞಾನವಾಹಿನಿ, ಸಾಧಕರ ಸರಣಿ, ಯುವವಾಣಿ, ಚಿಗುರು, ಕೃಷಿ ರಂಗ, ಚಿತ್ರರಂಜನೆ ಮುಂತಾದ ಕಾರ್ಯಕ್ರಮಗಳು ಈಗಲೂ ಜನರಿಗೆ ಆಪ್ತ ಎನಿಸಿವೆ. ದುರ್ಗ ವಾಸಿಗಳ ಮನೆಗಳಲ್ಲಿ, ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ರೇಡಿಯೊ ಸೆಟ್‌ಗಳು ಈಗಲೂ ಕಾಣಸಿಗುತ್ತಿರುವುದು ವಿಶೇಷವಾಗಿದೆ.
ಸಾಹಿತ್ಯ, ಜಾನಪದ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ವಿದ್ವಾಂಸರ ಬರಹಗಳನ್ನು ಆಕಾಶವಾಣಿ ಕೇಂದ್ರ ಸರಣಿ ರೂಪದಲ್ಲಿ ಪ್ರಸ್ತುತಪಡಿಸಿದೆ. ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಅವರ ಕಾಡುಗೊಲ್ಲರು, ಮ್ಯಾಸಬೇಡರ ಕುರಿತಾದ ಲೇಖನಗಳು ಸರಣಿ ರೂಪದಲ್ಲಿ ಪ್ರಸಾರವಾಗಿವೆ. ಜೊತೆಗೆ ಶಿವಣ್ಣ ಅವರ ಬಹರ ಆಧರಿಸಿ ರೂಪಿಸಿದ ಜುಂಜಪ್ಪ, ಎತ್ತಪ್ಪ ಸರಣಿಗಳು ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ತುರ್ಜುಮೆಯಾಗಿ ದೇಶದ ವಿವಿಧ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರ ಕಂಡಿವೆ.
‘ನಾನು ಚಿತ್ರದುರ್ಗ ಆಕಾಶವಾಣಿಗಾಗಿಯೇ ಬರೆದ ಲೇಖನ, ನಲ್ನುಡಿಗಳ ಸಂಗ್ರಹ ‘ರೇಡಿಯೊ ಜಾನಪದ’ ಪುಸ್ತಕವಾಗಿ ಪ್ರಕಟಗೊಂಡಿದೆ. ಆ ಕೃತಿಯನ್ನು ನಾನು ಬಾನುಲಿ ಕೇಂದ್ರಕ್ಕೇ ಅರ್ಪಿಸಿದ್ದೇನೆ. ಚಿತ್ರದುರ್ಗ ಆಕಾಶವಾಣಿ ಕೇಂದ್ರ ಸ್ಥಳೀಯ ಪ್ರತಿಭೆಗೆ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದೆ’ ಎಂದು ಮೀರಾಸಾಬಿಹಳ್ಳಿ ಶಿವಣ್ಣ ಹೇಳಿದರು.
‘ಜಾನಪದ ಝೇಂಕಾರ’ ಕಾರ್ಯಕ್ರಮದ ಮೂಲಕ ಅಪರೂಪದ ಬುಡಕಟ್ಟು ವಾದ್ಯಗಳನ್ನು ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ಆಯಾ ವಾದ್ಯಗಾರರನ್ನು ಆಹ್ವಾನಿಸಿ ಕಾರ್ಯಕ್ರಮ ಕೊಡಿಸಲಾಗಿದೆ. ನಶಿಸಿ ಹೋಗುವ ಹಾಡುಗಳನ್ನು ಧ್ವನಿ ಮುದ್ರಿಸಿ ಉಳಿಸುವ ಕೆಲಸ ಮಾಡಲಾಗಿದೆ. ಹಲವು ರೂಪಕಗಳು ವಿವಿಧ ಆಕಾಶವಾಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿವೆ.
‘ಮೇದಿನಿಯೊಂದಿಗೆ ತಾದಾತ್ಮ್ಯ’ ರೂಪಕವು ಭೂಮಿಯ ಮಹತ್ವ ಸಾರುವಲ್ಲಿ ಯಶಸ್ವಿಯಾಗಿದೆ. ಮುಚ್ಚಿದ್ದ ಶಾಲೆ ತೆರೆದಾಗ ಆ ಯಶೋಗಾಥೆ ಕುರಿತು ತಯಾರಾದ ‘ಒಂದು ಶಾಲೆಯ ಆತ್ಮಕತೆ’, ವೇದಾವತಿ ನದಿಯ ಹರಿವಿನಂತೆ ಬಂದ ‘ವೇದಾವತಿಯ ಆತ್ಮಕತೆ’ ಮುಂತಾದವು ಜನರ ಮನಸ್ಸಿನಲ್ಲಿ ಹಸಿರಾಗಿವೆ. ತಮಿಳ್ ಸೆಲ್ವಿ ಅನುವಾದದ ‘ನಾನು ಅವಳಲ್ಲ ಅವನು’ ಕತೆ ಮಾಲಿಕೆಯಾಗಿ ಮೂಡಿಬಂದಿದೆ.
ಶಿಕ್ಷಣ ಕೇಂದ್ರವಾಗಿಯೂ ಗುರುತಿಸಿಕೊಂಡಿರುವ ಆಕಾಶವಾಣಿ ಕೇಂದ್ರ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಸಂಗಾತಿಯಾಗಿದೆ. ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಮಾರ್ಗದರ್ಶನ ಮಾಡಿಸಿ ರೈತರಿಗೂ ಆಪ್ತವಾಗಿದೆ.
ಆಕಾಶವಾಣಿ ಕೇಂದ್ರ 35ನೇ ವಸಂತಕ್ಕೆ ಕಾಲಿಟ್ಟ ಹೊತ್ತಿನಲ್ಲಿ ಶನಿವಾರ ಇಡೀ ದಿನ ಕಾರ್ಯಕ್ರಮ ಪ್ರಸಾರವಾದವು. ಸಾಹಿತಿಗಳು, ಕಲಾವಿದರು, ಸಾರ್ವಜನಿಕರು ಆಕಾಶವಾಣಿ ಕೇಂದ್ರ ನಡೆದುಬಂದ ಹಾದಿಯನ್ನು ಒಮ್ಮೆ ಮೆಲುಕು ಹಾಕಿದರು.
ಕೊರತೆಯ ನಡುವೆಯೂ ಕಾಯಕ ಚಿತ್ರದುರ್ಗ ಆಕಾಶವಾಣಿ ಸಿಬ್ಬಂದಿಯ ಕೊರತೆಯ ನಡುವೆಯೂ ತನ್ನ ಕಾಯಕ ಮುಂದುವರಿಸಿದೆ. ಭದ್ರಾವತಿ ಆಕಾಶವಾಣಿ ಕೇಂದ್ರದ ಸಹಾಯಕ ನಿಲಯ ನಿರ್ದೇಶಕ ಎಸ್.ಆರ್. ಭಟ್ ಅವರೇ ಚಿತ್ರದುರ್ಗ ಆಕಾಶವಾಣಿ ಕೇಂದ್ರವನ್ನೂ ಮುನ್ನಡೆಸುತ್ತಿದ್ದಾರೆ. ತಾಂತ್ರಿಕ ಪ್ರಸಾರ ವಿಭಾಗ ಸೇರಿ ಎಲ್ಲೆಡೆ ಸಿಬ್ಬಂದಿ ಕೊರತೆ ಇದೆ. ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಇಲ್ಲಿದ್ದಾರೆ. ಇಡೀ ಕೇಂದ್ರ ಹೊರಗಿನ (ಕ್ಯಾಶುವಲ್) ಸಿಬ್ಬಂದಿಯಿಂದಲೇ ನಡೆಯುತ್ತಿದೆ. ಅದರ ನಡುವೆಯೂ ಕೇಂದ್ರ ತನ್ನ ಛಾಪು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.