
ಹಿರಿಯೂರು: ವೇದಾವತಿ ನದಿಯ ಬಲದಂಡೆಗೆ ಹೊಂದಿಕೊಂಡಿರುವ ಗುಟುಕುಮಲ್ಲೇಶ್ವರ ದೇಗುಲದಲ್ಲಿ ಪಾದುಕೆಗಳು ಪತ್ತೆಯಾಗಿದ್ದು, ಕ್ರಿ.ಶ. 11–12ನೇ ಶತಮಾನಕ್ಕೆ ಸೇರಿರಬಹುದು ಎಂದು ಸ್ಥಳೀಯ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಶಿವರಾತ್ರಿಯಲ್ಲಿ ಗುಡಿಯ ಸ್ವಚ್ಛತೆಯ ವೇಳೆ ಭಾಗ್ಯಮ್ಮ ಎಂಬುವವರಿಗೆ ಪಾದುಕೆ ಸಿಕ್ಕಿದ್ದು, ದೇಗುಲದ ಮುಂದೆ ಸುರಕ್ಷಿತವಾಗಿ ಇಡಲಾಗಿದೆ.
ಹಲವು ಶಿಲಾಶಾಸನಗಳನ್ನು ಪತ್ತೆ ಮಾಡಿರುವ ತಾಲ್ಲೂಕಿನ ಆಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಟಿ. ಮಂಜುನಾಥ್ ಹಾಗೂ ಚಿಕ್ಕೇರಹಳ್ಳಿ ಅವರು ಪಾದುಕೆಗಳನ್ನು ವೀಕ್ಷಿಸಿ 11–12ನೇ ಶತಮಾನಕ್ಕೆ ಸೇರಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
1 ಅಡಿ ವಿಸ್ತೀರ್ಣದ, 10 ಕೆ.ಜಿ.ಯಷ್ಟು ಭಾರವಿರುವ ಕಲ್ಲಿನ ಮೇಲೆ ಪಾದಗಳೆರಡರ ನಡುವೆ ದೀಪವಿರುವಂತೆ ಕಡೆದ ಶಿಲ್ಪ ಕೆತ್ತನೆ ಇದೆ. ಕೆಳಹಂತದ ಕಲ್ಲಿನ ಸುತ್ತಲೂ ಹೂವು, ಬಳ್ಳಿಯನ್ನು ಸೊಗಸಾಗಿ ಕೆತ್ತಲಾಗಿದೆ. ಪಾದಗಳ ರಚನೆ, ಕಾಲ್ಗೆಜ್ಜೆಯ ಅಲಂಕಾರ ನೋಡಿದರೆ ದೇವತೆಯ ಪಾದಗಳಂತಿದೆ. ಇದೇ ರೀತಿಯ ಶಿಲ್ಪವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿಪುರದಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲೂ ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ತೊರೆಯಲ್ಲಿ ಇನ್ನು ಅನೇಕ ದೊಡ್ಡ ಶಿವಲಿಂಗಗಳು ಇರಬಹುದು. ಶೋಧನೆ ಮಾಡಿದರೆ ಪತ್ತೆ ಆಗುತ್ತವೆ ಎಂದು ದೇಗುಲದ ಅರ್ಚಕ ವೀರೇಶ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.