ADVERTISEMENT

ಚಿಕ್ಕಜಾಜೂರು | ಅಂದನೂರು ಕೆರೆ ನೀರು ಸೋರಿಕೆ: ರೈತರ ಆತಂಕ; ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:39 IST
Last Updated 26 ಅಕ್ಟೋಬರ್ 2025, 6:39 IST
ಚಿಕ್ಕಜಾಜೂರು ಸಮೀಪದ ಅಂದನೂರು ಕೆರೆಯಿಂದ ಸೋರಿಕೆಯಾಗುತ್ತಿರುವ ನೀರನ್ನು ವೀಕ್ಷಿಸುತ್ತಿರುವ ರೈತರು.
ಚಿಕ್ಕಜಾಜೂರು ಸಮೀಪದ ಅಂದನೂರು ಕೆರೆಯಿಂದ ಸೋರಿಕೆಯಾಗುತ್ತಿರುವ ನೀರನ್ನು ವೀಕ್ಷಿಸುತ್ತಿರುವ ರೈತರು.   

ಚಿಕ್ಕಜಾಜೂರು: ಸಮೀಪದ ಅಂದನೂರು ಕೆರೆ ಏರಿಯ ತಳ ಭಾಗದಲ್ಲಿ ರಂದ್ರವಾಗಿ ಕೆರೆಯಲ್ಲಿ ಸಂಗ್ರಹವಾದ ನೀರು ರಭಸವಾಗಿ ಹೊರಗೆ ಹರಿಯುತ್ತಿದ್ದು, ಕೆರೆ ಏರಿ ಪಕ್ಕದ ರೈತರ ತೋಟ ಹಾಗೂ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.

ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾದ ಅಂದನೂರು ಕೆರೆಗೆ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಅಡಿಯಲ್ಲಿ ನೀರು ಹರಿಸಲಾಗುತ್ತಿದೆ. ಜತೆಗೆ ಈಚೆಗೆ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ಆದರೆ, ಎರಡು ದಿನಗಳಿಂದ ಕೆರೆ ಏರಿಯ ಚೌಡಮ್ಮ ದೇವಸ್ಥಾನದ ಬಳಿ ಸಾಕಷ್ಟು ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಅಂದನೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್‌ ಸೇರಿ ಇತರರ ಅಡಿಕೆ ತೋಟಗಳಿಗೆ ಹಾಗೂ ರಾಗಿ ಬೆಳೆಗೆ ನೀರು ನುಗ್ಗಿದ್ದು, ರಾಗಿ ಪೈರು ನೀರಿನಲ್ಲಿ ಮುಳುಗಡೆಯಾಗಿದೆ.

ಈ ಬಗ್ಗೆ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದರು. ವಿಷಯ ತಿಳಿದ ಸಣ್ಣ ನೀರಾವರಿ ಎಂಜಿನಿಯರ್‌, ಕೆರೆಯ ಸ್ವಚ್ಛತೆಗಾಗಿ ಕೂಲಿ ಕಾರ್ಮಿಕರನ್ನು ಕಳಿಸಿದ್ದು, ಕಾರ್ಮಿಕರು ಕೆರೆಯ ಒಳ ಹಾಗೂ ಹೊರ ಭಾಗಗಳಲ್ಲಿ ಬೆಳೆದು ನಿಂತಿದ್ದ ಗಿಡ ಗೆಂಟಿಗಳನ್ನು ಸ್ವಚ್ಛಗೊಳಿಸಿದರು.

ADVERTISEMENT

ಹೊಳಲ್ಕೆರೆ ತಹಶೀಲ್ದಾರ್‌ ವಿಜಯಕುಮಾರ್‌ ಕುರಲಗುಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ನೀರು ಸೋರಿಕೆಯನ್ನು ನಿಲ್ಲಿಸಲು ಹಾಗೂ ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನಕ್ಕೆ ತರಲಾಗಿದೆ. ಭಾನುವಾರ ಅಥವಾ ಸೋಮವಾರದೊಳಗೆ ಸೋರಿಕೆ ನೀರು ನಿಲ್ಲಿಸಲಾಗುವುದು’ ಎಂದು ತಿಳಿಸಿದರು.

‘ತರಳಬಾಳು ಶ್ರೀಗಳ ಸತತ ಹೋರಾಟದಿಂದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರನ್ನು ತಂದು, ಈ ಭಾಗದ ರೈತರಿಗೆ ಅನುಕೂಲ ಮಾಡಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಪೋಲಾಗುತ್ತಿದೆ. ಶ್ರೀಗಳು ಇಲ್ಲಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೆರೆಯ ನೀರನ್ನು ಉಳಿಸಿಕೊಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜೆ. ಓಂಕಾರಸ್ವಾಮಿ ಮನವಿ ಮಾಡಿದ್ದಾರೆ.

ಚಿಕ್ಕಜಾಜೂರು ಸಮೀಪದ ಅಂದನೂರು ಕೆರೆಯಿಂದ ಸೋರಿಕೆಯಾಗುತ್ತಿರುವ ನೀರಿನ ಜಾಗವನ್ನು ಕೆರೆ ಏರಿಯ ಬದಿಯಲ್ಲಿ ಹುಡುಕಲು ಗಿಡ ಗೆಂಟೆಗಳನ್ನು ಸ್ವಚ್ಛಗೊಳಿಸುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕೂಲಿ ಕಾರ್ಮಿಕರು
ಚಿಕ್ಕಜಾಜೂರು ಸಮೀಪದ ಅಂದನೂರು ಕೆರೆಯಿಂದ ಸೋರಿಕೆಯಾಗುತ್ತಿರುವ ನೀರನ್ನು ವೀಕ್ಷಿಸುತ್ತಿರುವ ತಹಶೀಲ್ದಾರ್‌ ವಿಜಯಕುಮಾರ್‌ ಕುರಲಗುಂದಿ ಹಾಗೂ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.