ADVERTISEMENT

ಸಮಾಜಕ್ಕೆ ಶ್ರಮಿಸುವವರನ್ನು ಆಯ್ಕೆ ಮಾಡಿ: ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 2:33 IST
Last Updated 27 ಜುಲೈ 2022, 2:33 IST
ಹೊಸದುರ್ಗ ತಾಲ್ಲೂಕಿನ ಚಿಕ್ಕಯಗಟಿಯಲ್ಲಿ ಹಡಪದ ಅಪ್ಪಣ್ಣ 888ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.
ಹೊಸದುರ್ಗ ತಾಲ್ಲೂಕಿನ ಚಿಕ್ಕಯಗಟಿಯಲ್ಲಿ ಹಡಪದ ಅಪ್ಪಣ್ಣ 888ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.   

ಹೊಸದುರ್ಗ: ‘ನೋಟು ಕೊಟ್ಟವರಿಗೆ ಓಟು ಎಂಬ ಸಂಸ್ಕೃತಿಯಿಂದ ಹೊರಬಂದು ನಮ್ಮ ಕಷ್ಟಗಳನ್ನು ಅಪ್ಪಿಕೊಂಡು ನಿವಾರಣೆಗಾಗಿ ಶ್ರಮಿಸುವ ನಾಯಕನನ್ನು ಆಯ್ಕೆ ಮಾಡಬೇಕು’ ಎಂದು ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ತಿಳಿಸಿದರು.

ಹಡಪದ ಅಪ್ಪಣ್ಣ ಸಮಾಜದಿಂದ ತಾಲ್ಲೂಕಿನ ಚಿಕ್ಕಯಗಟಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ 888ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಶಾಸಕರು ಗೈರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸ್ವಾಮೀಜಿ ಅವರು, ‘ಇದೇ ಧೋರಣೆ ಮುಂದುವರಿದರೆ ನಾವು ಏನೆಂದು ತೋರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ‘ಇತರ ಹೆಸರುಗಳಿಂದ ಕರೆಯಿಸಿಕೊಳ್ಳುವ ಹಡಪದರೆಲ್ಲರೂ ಒಂದಾಗಬೇಕು. ಸಂವಿಧಾನದ ಆಶಯದಂತೆ ನಡೆಯಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಜಾಗೃತರಾಗಬೇಕು. ಸಮಾಜದವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮುಂದೆ ಬಂದರೆ ಮಠದಿಂದ ರಿಯಾಯಿತಿ ದರದಲ್ಲಿ ತರಬೇತಿಗೆ ಅವಕಾಶ ನೀಡಲಾಗುತ್ತದೆ’ ಎಂದರು.

ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ‘ಹಡಪದ ಅಪ್ಪಣ್ಣ ಸಮಾಜದವರು ಸಂಕುಚಿತ ಮನೋಭಾವದಿಂದ ಹೊರಬಂದು, ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು’ ಎಂದರು.

ಉಪನ್ಯಾಸಕ ಸದಾಶಿವ ಅವರು ಹಡಪದ ಅಪ್ಪಣ್ಣ ಕುರಿತು ಉಪನ್ಯಾಸ ನೀಡಿದರು. ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಅಧ್ಯಕ್ಷ ಸಿದ್ಧಪ್ಪ ಹಡಪದ್,ಜಿಲ್ಲಾ ಅಧ್ಯಕ್ಷ ಜಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ಹನುಮಂತಪ್ಪ, ಮಲ್ಲಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತಿ ರವಿ, ಮಾಜಿ ಅಧ್ಯಕ್ಷ ಜಿ. ರುದ್ರಪ್ಪ, ಚಿಕ್ಕಯಗಟಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಟಿ. ಸತೀಶ್, ಉಪಾಧ್ಯಕ್ಷೆ ಪಿ.ವಿ. ವೀಣಾ ರುದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಚ್.ಎನ್. ರಮೇಶ್, ಗೌರವಾಧ್ಯಕ್ಷ ಎಚ್‌.ವಿ. ಪುಟ್ಟಪ್ಪ, ಉಪಾಧ್ಯಕ್ಷ ಎಚ್‌.ಎಂ. ರಾಜಣ್ಣ, ಕಾರ್ಯದರ್ಶಿ ಎನ್. ಸೋಮಶೇಖರ್, ಖಜಾಂಚಿ ಎಂ. ಸುದರ್ಶನ್ ಮತ್ತು ಗ್ರಾಮ ಪಂಚಾಯಿತಿ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.