ADVERTISEMENT

‘ಮಿನರಲ್ಸ್‌ ಕಾರ್ಪೊರೇಷನ್‌ಗೆ ಆದಾಯ ತರಲು ಪ್ರಯತ್ನ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 13:35 IST
Last Updated 30 ನವೆಂಬರ್ 2020, 13:35 IST
ಹೊಸದುರ್ಗದಲ್ಲಿ ಸೋಮವಾರ ಮಿನರಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ನೂತನ ಅಧ್ಯಕ್ಷ ಎಸ್‌. ಲಿಂಗಮೂರ್ತಿ ಅವರ ರೋಡ್ ‌ಷೋ ನಡೆಯಿತು.
ಹೊಸದುರ್ಗದಲ್ಲಿ ಸೋಮವಾರ ಮಿನರಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ನೂತನ ಅಧ್ಯಕ್ಷ ಎಸ್‌. ಲಿಂಗಮೂರ್ತಿ ಅವರ ರೋಡ್ ‌ಷೋ ನಡೆಯಿತು.   

ಹೊಸದುರ್ಗ: ‘ರಾಜ್ಯ ಮಿನರಲ್‌ ಕಾರ್ಪೊರೇಷನ್‌ ಲಿಮಿಟೆಡ್‌ಗೆ ₹ 1 ಸಾವಿರ ಕೋಟಿ ಆದಾಯ ತರುತ್ತೇನೆ. ಮತ್ತೊಮ್ಮೆ ರೈತರ ಸಾಲಮನ್ನಾ ಮಾಡಿಸಲು ಹಾಗೂ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ನಿಗಮದ ನೂತನ ಅಧ್ಯಕ್ಷ ಎಸ್‌. ಲಿಂಗಮೂರ್ತಿ ಭರವಸೆ ನೀಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘20 ವರ್ಷಗಳ ನನ್ನ ಹೋರಾಟದ ಫಲವಾಗಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಇನ್ನಿತರ ವರಿಷ್ಠರ ಸಹಕಾರದಿಂದ ಅಧಿಕಾರ ಸಿಕ್ಕಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಬಿಜೆಪಿ ಗಟ್ಟಿಯಾಗಿದ್ದು, ಸಮಗ್ರ ಅಭಿವೃದ್ಧಿಗೆ ನಾನು ಹಾಗೂ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಅವರು ಒಟ್ಟಾಗಿ ಶ್ರಮಿಸುತ್ತೇವೆ. ಈ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿಯ ಬಾವುಟ ಹಾರಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಗೂಳಿಹಟ್ಟಿ ಡಿ. ಶೇಖರ್‌, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಿಂಗಮೂರ್ತಿ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ತಾಲ್ಲೂಕಿಗೆ ನ್ಯಾಯ ಒದಗಿಸಿದ್ದಾರೆ. ನೂರಾರು ನಿಗಮಗಳಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಮಿನರಲ್‌ ಕಾರ್ಪೊರೇಷನ್‌ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವುದು ಶ್ಲಾಘನೀಯ. ಈ ಬಾರಿ ನಾನು ಶಾಸಕನಾಗಲು ಲಿಂಗಮೂರ್ತಿ ಟಿಕೆಟ್‌ ತ್ಯಾಗ ಮಾಡಿದ್ದರು. ನಾನು ಪಕ್ಷಕ್ಕೆ ಸೇರುವಾಗ ಯಡಿಯೂರಪ್ಪ ಅವರು ಕೊಟ್ಟಿದ್ದ ಮಾತಿನಂತೆ ನಡೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಉನ್ನತವಾದ ಹುದ್ದೆಗಳು ಲಭಿಸಲಿ’ ಎಂದು ಹಾರೈಸಿದರು.

ಸಮಾರಂಭಕ್ಕೂ ಮೊದಲು ಅಭಿಮಾನಿಗಳು ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಲಿಂಗಮೂರ್ತಿ ರೋಡ್‌ಷೋ ನಡೆಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಪುರಸಭೆ ಅಧ್ಯಕ್ಷ ಎಂ. ಶ್ರೀನಿವಾಸ್‌, ಬಿಜೆಪಿ ಮಂಡಲದ ಅಧ್ಯಕ್ಷ ಆರ್‌. ಜಗದೀಶ್‌, ಮುಖಂಡರಾದ ಮಲ್ಲಿಕಾರ್ಜುನ್‌, ಕೆ.ಎಸ್‌. ಕಲ್ಮಠ್‌, ಎಚ್‌.ಬಿ. ರವಿಕುಮಾರ್‌, ಡಿ.ಟಿ.ವಟ್ಟಿ ಲಕ್ಷ್ಮಣ್‌, ಎಂ.ಲಕ್ಷ್ಮಣ್‌, ಗೂಳಿಹಟ್ಟಿ ಕೃಷ್ಣಮೂರ್ತಿ, ಮೀನಾಕ್ಷಿ ನಂದೀಶ್‌, ಡಿ. ಮಂಜುನಾಥ್‌, ಆರ್‌.ಡಿ. ಸೀತಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.